ಉಡುಪಿ: ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ ಕುರಿತು ಕಾಂಗ್ರೆಸ್ ನಡೆಸುತ್ತಿರುವ ಪ್ರತಿಭಟನೆ ಕೇವಲ ನಾಟಕ ಎಂದು ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಬಿ. ಪ್ರಥ್ವಿರಾಜ್ ಶೆಟ್ಟಿ ಲೇವಡಿ ಮಾಡಿದರು.
ಕಳೆದ ಏಳು ವರ್ಷಗಳ ಹಿಂದೆ ಆರಂಭಗೊಂಡ ಇಂದ್ರಾಳಿ ರೈಲ್ವೆ ಮೇಲ್ಸೇತುವೆ ಕಾಮಗಾರಿ, ಕೋಟ ಶ್ರೀನಿವಾಸ ಪೂಜಾರಿ ಸಂಸದರಾಗಿ ಆಯ್ಕೆಯಾದ ನಂತರ ವೇಗ ಪಡೆದುಕೊಂಡಿತ್ತು. ಸಂಸದರು ಹಲವಾರು ಬಾರಿ ಇಂದ್ರಾಳಿ ಸೇತುವೆ ಸ್ಥಳಕ್ಕೆ ಭೇಟಿಕೊಟ್ಟು, ಜಿಲ್ಲಾಡಳಿತದ ಸಮಕ್ಷಮದಲ್ಲಿ ಸಭೆ ನಡೆಸಿದ ಪರಿಣಾಮ ಕಾಮಗಾರಿಯ ವೇಗ ಹೆಚ್ಚಿತ್ತು. ಮಾತ್ರವಲ್ಲದೆ, ಇಂದ್ರಾಳಿ ಸೇತುವೆಯ ಕಾಮಗಾರಿ ವಿಳಂಬ ಮಾಡುತ್ತಿರುವ ಗುತ್ತಿಗೆದಾರರು ಅಧಿಕಾರಿಗಳ ಮೇಲೆ ಪ್ರಕರಣ ದಾಖಲಾಗಿ ಆರಕ್ಷಕ ಠಾಣೆಯಲ್ಲಿ ಮುಚ್ಚಳಿಕೆ ಬರೆಸಿಕೊಂಡಿದ್ದು, ಸರಕಾರಿ ವ್ಯವಸ್ಥೆಯಲ್ಲಿ ಪ್ರಥಮವಾಗಿದೆ. ಇಂದ್ರಾಳಿ ಸೇತುವೆ ಕಾಮಗಾರಿ ಮುಗಿಯುವ ಹಂತದಲ್ಲಿ ಕಾಂಗ್ರೆಸ್ ಪಕ್ಷ ಪ್ರತಿಭಟನೆ ನಾಟಕವಾಡುತ್ತಿದೆ. ಎಂದು ಪ್ರಥ್ವಿರಾಜ್ ಆರೋಪಿಸಿದರು.
ಸಂತೆಕಟ್ಟೆ – ಕಲ್ಯಾಣಪುರ ಓವರ್ಪಾಸ್ ನ ಕಾಮಗಾರಿ ಕೋಟ ಸಂಸದರಾದ ನಂತರವೇ ವೇಗ ಪಡೆದಿದ್ದು ಇದೀಗ ಎರಡು ಕಡೆ ಸರ್ವಿಸ್ ರಸ್ತೆಗಳನ್ನು ತೆರೆದಿರುವುದರಿಂದ ಸುಗಮ ಸಂಚಾರಕ್ಕೆ ಅನುಕೂಲವಾಗಿದ್ದು, ಬಹುತೇಕ ಸಮಸ್ಯೆಗಳು ಪರಿಹಾರವಾಗಿದೆ. ಕಾಮಗಾರಿ ಅಂತಿಮ ಹಂತಕ್ಕೆ ಬಂದ ನಂತರ ಮತ್ತೆ ಕಾಂಗ್ರೆಸ್ ಪಕ್ಷ ಪ್ರತಿಭಟನೆ ಎಚ್ಚರಿಕೆ ನೀಡಿರುವುದು ಕೇವಲ ಪ್ರಚಾರದ ತಂತ್ರ ಎಂದು ಉಡುಪಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಆಪಾದಿಸಿದೆ.
ಅಂಬಲಪಾಡಿ ಮೇಲ್ಸೇತುವೆ ಕಾಮಗಾರಿ ಈಗಾಗಲೇ ತ್ಬರಿತ ಗತಿಯಲ್ಲಿ ಸಾಗುತ್ತಿದೆ. ಸಕಾಲದಲ್ಲಿ ಮುಗಿಯುವ ಹಂತದಲ್ಲಿದೆ. ಪರ್ಕಳದ ತಿರುವಿನ ಬಳಿ ನೇರ ಸಂಪರ್ಕ ರಸ್ತೆ ನ್ಯಾಯಾಲಯದ ತಡೆಯಾಜ್ಞೆ ನಡುವೆಯೂ ಸಂಸದರ ಪರಿಶ್ರಮದಿಂದ ಭೂ ಮಾಲಿಕರಿಗೆ ನ್ಯಾಯಾಲಯದಲ್ಲಿ ಠೇವಣಿ ಇರಿಸಿ ಕಾಮಗಾರಿ ಆರಂಭಿಸಲು ನ್ಯಾಯಾಲಯ ಹಸಿರು ನಿಶಾನೆ ತೋರಿಸಿದೆ. NH 169 ನ ಮಲ್ಪೆ ಕಲ್ಮಾಡಿ ಆದಿಉಡುಪಿ ರಸ್ತೆಯ ಭೂ ಸ್ವಾದಿನ ಪ್ರಕ್ರಿಯೆಗಳು ಮೊದಲು ನಿಧಾನವಾಗಿದ್ದು, ಕೋಟ ಸಂಸದರು ಆಯ್ಕೆಯಾಗುತ್ತಲೆ ಭೂಸ್ವಾಧೀನ ಪ್ರಕ್ರಿಯೆ ಚಟುವಟಿಕೆ ನಿರಂತರವಾಗಿ ಮಾಡಿದ್ದರಿಂದ ಈಗಾಗಲೇ ಮಲ್ಪೆ, ಕಲ್ಮಾಡಿ ಭಾಗದ 44 ಭೂಮಾಲೀಕರಿಗೆ ಪರಿಹಾರ ಪಾವತಿಯಾಗಿದೆ.
ಪರಿಹಾರದ ಕಡತಗಳನ್ನು ಅಂತಿಮಗೊಳಿಸಿ ರಸ್ತೆಯ ಕಾಮಗಾರಿಗೆ ಚಾಲನೆ ಕೊಟ್ಟಿರುವುದು ಸಾರ್ವತ್ರಿಕ ಸತ್ಯ.
ಸಂಸದ ಕೋಟಾ ಇಷ್ಟೆಲ್ಲ ಕಾರ್ಯ ಚಟುವಟಿಕೆಯನ್ನು ಮಾಡುತ್ತಿರುವುದು ಕಣ್ಣಾರೆ ಕಂಡ ಮೇಲೂ ಕೇವಲ ರಾಜಕಾರಣಕ್ಕಾಗಿ ಕಾಂಗ್ರೆಸ್ ಮುಖಂಡರಾದ ರಮೇಶ್ ಕಾಂಚನ್, ಅಮೃತ್ ಶೆಣೈ ಮೊದಲಾದವರು ಸುಳ್ಳು ಆರೋಪವನ್ನು ಮಾಡುತ್ತಿದ್ದಾರೆ. ತಮ್ಮ ಚಳುವಳಿ ಪ್ರತಿಭಟನೆಗೆ ಜನಬೆಂಬಲ ಸಿಗದಿರುವ ಕಾರಣಕ್ಕೆ ಸಾರ್ವಜನಿಕ ಗಮನ ಸೆಳೆಯಲು ಲೋಕಸಭಾ ಸದಸ್ಯರ ಶಿಕ್ಷಣ ಮತ್ತು ಭಾಷೆ ಬಗ್ಗೆ ಉಲ್ಲೇಖಿಸಿ ಪ್ರಚಾರ ಪಡೆಯಲು ಹೊರಟಿದೆ.
ಹಿಂದೆ ಚುನಾವಣಾ ಸಂದರ್ಭದಲ್ಲಿ ಕೋಟ ಅವರ ಶಿಕ್ಷಣ ಮತ್ತು ಭಾಷೆಯ ಬಗ್ಗೆ ಉಲ್ಲೇಖಿಸಿ ಮತದಾರರಿಂದ ಶಿಕ್ಷೆಗೆ ಒಳಗಾದ ಕಾಂಗ್ರೆಸ್ ಇನ್ನೂ ಅದೇ ವಿಚಾರದಲ್ಲಿ ಸಂಸದರ ಟೀಕೆ ಮಾಡುತ್ತಿರುವುದು ಹಾಸ್ಯಾಸ್ಪದ. ಸಂಸದರ ಹಿಂದಿ ಭಾಷೆಯ ಬಗ್ಗೆ ಮಾತನಾಡುವ ಉಡುಪಿ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ರಮೇಶ್ ಕಾಂಚನ್ ತಮ್ಮ ವಿದ್ಯಾರ್ಹತೆಯನ್ನ ಮೊದಲು ಬಹಿರಂಗಪಡಿಸಲಿ ವಾಸ್ತವಿಕವಾಗಿ ಕಾಂಗ್ರೆಸ್ ಸರಕಾರ ಬಂದ ನಂತರ ಒಂದೇ ಒಂದು PWD ರಸ್ತೆಯಾಗಲಿ ಜಿಲ್ಲಾ ಪಂಚಾಯತ್, ತಾಲೂಕು ಪಂಚಾಯತ್ ಸಹಿತ ಯಾವುದೇ ಗ್ರಾಮೀಣ ರಸ್ತೆ ರಚನೆ ಮಾಡೋದಿರಲಿ, ಕನಿಷ್ಠ ಹೊಂಡ ಮುಚ್ಚುವ ಕೆಲಸಮಾಡಿಸುವ ಯೋಗ್ಯತೆ ಕಾಂಗ್ರೆಸಿಗಿಲ್ಲ. ಆದರೆ ಪ್ರಚಾರಕ್ಕಾಗಿ ಉಡುಪಿ ಶಾಸಕರಾದ ಯಶ್ಪಾಲ್ ಸುವರ್ಣ ಅವರನ್ನು ಪದೇ ಪದೇ ಟೀಕಿಸುತ್ತಿದ್ದಾರೆ. ಇದು ಕಾಂಗ್ರೇಸಿಗರ ವೈಫಲ್ಯತೆಯನ್ನು ಎತ್ತಿ ಹಿಡಿಯುತ್ತದೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷ ಪೃಥ್ವಿರಾಜ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ದ ಆಡಳಿತ ವಿಫಲತೆ ಬಗ್ಗೆ ಬಿಂಬಿಸಿ ಯುವ ಮೋರ್ಚ ಜಿಲ್ಲೆಯ ಪ್ರತೀ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಹೋರಾಟ ನಡೆಸಲಿದೆ ಎಂದು ಯುವ ಮೋರ್ಚಾ ಅಧ್ಯಕ್ಷರು ತಿಳಿಸಿದರು.
ಪುನಃ ಸಂಸದರು, ಶಾಸಕರ ಟೀಕೆ ಮಾಡುವ ಪ್ರವೃತ್ತಿಯನ್ನು ಮುಂದುವರೆಸಿದರೆ ಅವರದೇ ಭಾಷೆಯಲ್ಲಿ ಉತ್ತರಿಸುವುದಾಗಿ ಎಚ್ಚರಿಸಿದ್ದಾರೆ.