ಉಡುಪಿ: ವಿಶ್ವಕರ್ಮ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ಜಿಲ್ಲಾಧಿಕಾರಿಗಳ ಸಭೆ ಕರೆಯುವಂತೆ ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪತ್ರವನ್ನು ಬರೆದಿದ್ದಾರೆ.
ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 60,000ಕ್ಕೂ ಮಿಕ್ಕಿ ಫಲಾನುಭವಿಗಳು ವಿಶ್ವಕರ್ಮ ಯೋಜನೆಗೆ ಅರ್ಜಿ ಸಲ್ಲಿಸಿದ್ದು, ಇಲಾಖೆಗಳ ಸಂಪರ್ಕದ ಕೊರತೆಯಿಂದ ಯೋಜನೆ, ಕುಶಲಕರ್ಮಿಗಳಿಗೆ ಅದರಲ್ಲೂ ಬಡವರಿಗೆ ತಲುಪಲು ವಿಳಂಬವಾಗುತ್ತಿದೆ. ಕೌಶಲ್ಯಾಭಿವೃದ್ಧಿ ಮತ್ತು ಕೈಗಾರಿಕಾ ಇಲಾಖೆಗಳೊಂದಿಗೆ ರಾಷ್ಟ್ರೀಕೃತ ಬ್ಯಾಂಕ್ಗಳ ಸಹಯೋಗದಲ್ಲಿ ಪ್ರಕಟಿತ ಸಾಂಪ್ರದಾಯಿಕ ಕುಲಕಸುಬುದಾರರಿಗೆ ಸಿಗುವ ವಿಶ್ವಕರ್ಮ ಯೋಜನೆಯ ಜಿಲ್ಲಾ ಅನುಷ್ಠಾನಾಧಿಕಾರಿಯಾಗಿ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿಗಳಿರುತ್ತಾರೆ. ಆದರೆ, ಜಿಲ್ಲಾಧಿಕಾರಿಗಳು ಮತ್ತು ಇತರ ಇಲಾಖಾಧಿಕಾರಿಗಳ ಸಮನ್ವಯದ ಕೊರತೆಯಿಂದ, ಕೇಂದ್ರ ಸರ್ಕಾರ 13,000 ಕೋಟಿ ರೂ. ಭದ್ರತೆ ಹೊಂದಿರುವ ವಿಶ್ವಕರ್ಮ ಯೋಜನೆಯ ಪ್ರಗತಿಯಲ್ಲಿ ಹಿನ್ನಡೆಯಲ್ಲಿದೆ.
ಈ ಯೋಜನೆ ಬಡವರ ಕಲ್ಯಾಣ ಯೋಜನೆ ಎಂಬ ಮಾಹಿತಿಯನ್ನು ಪ್ರತಿ ಜಿಲ್ಲಾಧಿಕಾರಿಗಳಿಗೆ ಮಾಹಿತಿ ಒದಗಿಸಿ, ವಿಶ್ವಕರ್ಮ ಯೋಜನೆಯ ಬಗ್ಗೆ ಜಿಲ್ಲೆಯಲ್ಲಿ ಪ್ರತಿ 15 ದಿನಗಳಿಗೊಮ್ಮೆ ಪ್ರಗತಿ ಪರಿಶೀಲನೆ ಮಾಡಲು ಆದೇಶ ನೀಡಬೇಕೆಂದು ಕೋರಿದ್ದಾರೆ.
ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳು ಹಾಗೂ ಸಂಬಂಧಿತ ಅಧಿಕಾರಿಗಳ ಜೊತೆ ವಿಧಾನಸೌಧದಲ್ಲಿ ಸಭೆ ಕರೆದು ಅಗತ್ಯ ನಿರ್ದೇಶನ ನೀಡಬೇಕೆಂದು ಕೋರಿದ್ದಾರೆ.
ಕುಶಲಕರ್ಮಿಗಳಿಗೆ ಬೆಂಬಲ ನೀಡುವ ದೃಷ್ಟಿಯಿಂದ ಆರಂಭಿಸಿರುವ ವಿಶ್ವಕರ್ಮ ಯೋಜನೆ, ರಾಜ್ಯ ಸರಕಾರಿ ಯಂತ್ರದ ನಿರ್ಲಕ್ಷದಿಂದ ನೆನೆಗುದಿಗೆ ಬಿದ್ದರೆ ನಿಜಕ್ಕೂ ರಾಜ್ಯದ ಕುಶಲಕರ್ಮಿಗಳಿಗೆ ಹಾಗೂ ಬಡವರಿಗೆ ಅನ್ಯಾಯವಾಗುತ್ತದೆ. ಈ ಬಗ್ಗೆ ತಾವು ಕಾರ್ಯ ಪ್ರವೃತ್ತರಾಗಿ ತುರ್ತು ಕ್ರಮ ಕೈಗೊಳ್ಳಬೇಕೆಂದು ಕೋರಿದ್ದಾರೆ.