ಸಾಸ್ತಾನ: ಹಳದಿ ಬೋರ್ಡ್ ವಾಹನಗಳಿಗೆ ಟೋಲ್ ತೆಗೆದುಕೊಳ್ಳಲು ಆರಂಭಿಸಿದ ಹಿನ್ನೆಲೆ ಸಾಸ್ತಾನ ಟೋಲ್ ಪ್ಲಾಝಾದಲ್ಲಿ ಹಳದಿ ಬೋರ್ಡ್ ವಾಹನ ಚಾಲಕರು ಮತ್ತು ಮಾಲೀಕರಿಂದ ದಿಡೀರ್ ಪ್ರತಿಭಟನೆ ನಡೆಯಿತು.

ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಚಾಲಕರು ಮತ್ತು ಸಾರ್ವಜನಿಕರು ಟೋಲ್ ಪಡೆಯುವ ನಿರ್ಧಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಪೆಟ್ರೋಲ್ ಹಾಕುವುದಕ್ಕೂ ಟೋಲ್ ಕೊಟ್ಟು ಹೋಗಬೇಕು ಇದೆಂತಾ ಅವ್ಯವಸ್ಥೆ. ನಮಗೆ ಟೋಲ್ ಬೇಡ. ಇದಕ್ಕೆ ಶಾಶ್ವತ ಪರಿಹಾರ ಬೇಕು ಎಂದು ಆಗ್ರಹಿಸಿದರು.

ಸ್ಥಳಕ್ಕೆ ಆಗಮಿಸಿದ ಬ್ರಹ್ಮಾವರ ವೃತ್ತ ನಿರೀಕ್ಷಕ ದಿವಾಕರ್ ಕೋಟ ಠಾಣಾ ಪಿಎಸ್‌ಐ ರಾಘವೇಂದ್ರ, ಸುಧಾ ಪ್ರಭು ಪ್ರತಿಭಟನಾಕಾರರನ್ನು ಸಮಾಧಾನಿಸುವ ಪ್ರಯತ್ನ ಮಾಡಿದರು. ಸಂಸದ ಕೋಟ ಶ್ರೀನಿವಾಸ ಪೂಜಾರಿಯವರನ್ನು ಸಂಪರ್ಕಿಸಿದ ಮುಖಂಡ ಗಿರಿಜಾ ಭೋಜ ಪೂಜಾರಿ ಈ ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಆಗ್ರಹಿಸಿದರು. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡಿದ ಸಂಸದರು ಡಿ.20ರ ಶನಿವಾರ ಸಂಜೆ 6ರ ವರೆಗೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದರು. ಆ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಚೆಂಡು ಯಾರ ಅಂಗಳಕ್ಕೆ?
ಕೆಕೆಆರ್ ಕಂಪೆನಿಯವರು ಕೇಂದ್ರ ಸರಕಾರದಿಂದ ಟೋಲ್ ತೆಗೆದುಕೊಳ್ಳುವಂತೆ ಆದೇಶವನ್ನು ತೆಗೆದುಕೊಂಡು ಬಂದಿದ್ದಾರೆ ಎನ್ನಲಾಗಿದೆ. ಆದರೆ ಈ ಹಿಂದೆ ಹಲವು ಬಾರಿ ಆದೇಶ ಬಂದಿದ್ದರೂ ಎಂಪಿ ಮತ್ತು ಜಿಲ್ಲಾಧಿಕಾರಿಗಳು ಸಾರ್ವಜನಿಕ ಹಿತಾಸಕ್ತಿಯಿಂದ ಜಾರಿಗೊಳಿಸಿರಲಿಲ್ಲ. ಈಗ ಪುನಃ ಟೋಲ್ ಸಂಗ್ರಹಕ್ಕೆ ಕೆಕೆಆರ್ ಹೊರಟಿದೆ. ಮುಂದೇನಾಗುವುದು ಎನ್ನುವುದೇ ಇರುವ ಕುತೂಹಲ. ಇತ್ತಿಚಿಗೆ ನಡೆದ ರಾಷ್ಟ್ರೀಯ ಹೆದ್ದಾರಿ ಸಭೆಯಲ್ಲಿ ವಾಣಿಜ್ಯ ವಾಹನಗಳಿಗೆ ಟೋಲ್ ವಿನಾಯಿತಿ ಇಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದರು. ಈಗ ಜಿಲ್ಲಾಧಿಕಾರಿಗಳು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂದು ಕಾದು ನೋಡಬೇಕಿದೆ. ಕೋಟ ಜಿಲ್ಲಾ ಪಂಚಾಯತ್ ವ್ಯಾಪ್ತಿಗೆ ಇದ್ದ ವಿನಾಯಿತಿ 5.ಕಿ.ಮೀ ವ್ಯಾಪ್ತಿಗೆ ಇಳಿಸುವ ಬಗ್ಗೆಯೂ ಆಲೋಚನೆ ನಡೆಯುತ್ತಿದೆ. ಇದಕ್ಕೆ ವಾಹನ ಚಾಲಕ ಮಾಲೀಕರು ಒಪ್ಪುತ್ತಾರಾ? ಎನ್ನುವುದು ನೋಡಬೇಕಿದೆ.

ಕೋಟ ಹೈಸ್ಕೂಲ್‌ನಿಂದ ಜಿಲ್ಲಾಧಿಕಾರಿ ಕಚೇರಿಗೆ
ನಾಳೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ಕರೆಯುವುದಾಗಿ ಜಿಲ್ಲಾಧಿಕಾರಿಗಳು ಹೇಳಿದ್ದಾರೆ. ಎಂಪಿ ಕೋಟ ಶ್ರೀನಿವಾಸ ಪೂಜಾರಿ ಅವರು ಹಾಜರಿರುವುದಾಗಿ ಹೇಳಿದ್ದಾರೆ. ಕೋಟ ಹೈಸ್ಕೂಲ್‌ನಲ್ಲಿ ನಾವೆಲ್ಲರೂ ಒಟ್ಟಾಗಿ ಜಿಲ್ಲಾಧಿಕಾರಿ ಕಚೇರಿಗೆ ತೆರಳುವುದಾಗಿ ಭೋಜ ಪೂಜಾರಿ ನ್ಯೂಸ್ ರೇಸ್‌ಗೆ ತಿಳಿಸಿದ್ದಾರೆ.
