ಉದುಪಿ: ರಾಷ್ಟ್ರೀಯ ಹೆದ್ದಾರಿಯ ಸಮಸ್ಯೆಗಳ ಕುರಿತು ಉಡುಪಿಯ ವಸಂತ ಮಂಟಪದಲ್ಲಿ ಸಾರ್ವಜನಿಕ ಸಭೆ
ಶನಿವಾರ ಜರಗಿತು.

ರಾಷ್ಟ್ರೀಯ ಹೆದ್ದಾರಿ ಬಳಕೆದಾರರ ಹಿತರಕ್ಷಣಾ ವೇದಿಕೆಯಿಂದ ಜರಗಿದ ಈ ಕಾರ್ಯಕ್ರಮದ ಶಾಸಕರು ಮತ್ತು ಅಧಿಕಾರಿಗಳು ಭಾಗವಹಿಸಿದ್ದರು.
ಪ್ರಾಸ್ತಾವಿಕ ಮಾತನಾಡಿದ ವೇದಿಕೆಯ ಅಧ್ಯಕ್ಷ ಭಾಸ್ಕರ್ ಶೆಟ್ಟಿ, ನಾವು ಮೂರು ಲಕ್ಷ ಸಹಿ ಸಂಗ್ರಹಿಸಿ
ಹೋರಾಟ ನಡೆಸಿದ ಪರಿಣಾಮ ಅಂಬಲಪಾಡಿಯಲ್ಲಿ ಫ್ಳೈಓವರ್ ಕಾಮಗಾರಿಗೆ ಟೆಂಡರ್ ಆಗಿದೆ.
ಸಂತೆಕಟ್ಟೆ, ಅಂಬಲಪಾಡಿ ಹಾಗೂ ಕಟಪಾಡಿಯಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಏಕಕಾಲದಲ್ಲಿ
ಅನುಮೋದನೆ ಸಿಕ್ಕರೂ, ವಿವಿಧ ತಾಂತ್ರಿಕ ಕಾರಣಗಳಿಂದ ವಿಳಂಭವಾಗಿದೆ. ಜಿಲ್ಲಾಧಿಕಾರಿಗಳ
ಸೂಚನೆ ಮೇರೆಗೆ ಡಿ.16ಕ್ಕೆ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಎಂಜಿನಿಯರ್ ಜಿ.ಆರ್
ಸಾಹು, ಫ್ಲೈಓವರ್ನ ನಿರ್ಮಾಣದ ಬಗ್ಗೆ ಮಾಹಿತಿ ನೀಡಿದರು. 1.2 ಕಿ.ಮೀ ಉದ್ದದ ಮೂರು ಪಿಲ್ಲರ್ ಫ್ಲೈಓವರ್ ಜತೆ ಅಂಡರ್ಪಾಸ್ ಕಾಮಗಾರಿಯಾಗಿದೆ. 18 ತಿಂಗಳ ಪ್ರಾಜೆಕ್ಟ್ ಇದಾಗಿದೆ. 23.53 ಕೋಟಿ ರೂ. ವೆಚ್ಚದಲ್ಲಿ ಅಂಡರ್ಪಾಸ್ ನಿರ್ಮಾಣಗೊಳ್ಳಲಿದೆ. ಕಾರ್ಲಾ ಕನ್ಸ್ಟ್ರಕ್ಷನ್ಸ್ನವರು ಈ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲ್ಲಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭ ಆಗಮಿಸಿದ ಸ್ಥಳೀಯರು ಅಧಿಕಾರಿಗಳ ಜೊತೆ ಚರ್ಚೆ ನಡೆಸಿ, ಯೋಜನೆಯ ಮಾಹಿತಿ ಮತ್ತು ತಮ್ಮ ಅನುಮಾನಗಳಿಗೆ ಪರಿಹಾರ ಕಂಡುಕೊಂಡರು. ಈ ನಡುವೆ ಶೀಘ್ರ ಕಾಮಗಾರಿ ಆರಂಭಿಸಲೇ ಬೇಕು ಎಂಬ ಒತ್ತಾಯ ಕೇಳಿಬಂತು. ಕೆಲವು ಉದ್ಯಮಿಗಳ ಒತ್ತಡಕ್ಕೆ ಮಣಿದು ಕಾಮಗಾರಿ ವಿಳಂಬ ಮಾಡಲಾಗುತ್ತಿದೆ ಎಂಬ ದೂರುಗಳು ಕೇಳಿ ಬಂತು. ಅದಕ್ಕೆ ಅಧಿಕಾರಿ ಅಲ್ಲಗೆಳೆದರು. ಸ್ಪಾನ್ ಅಳತೆ 12 ಮೀಟರ್ನಿಂದ 15 ಮೀಟರ್ಗೆ ಏರಿಸಲಾಗಿದೆ. ಇದಕ್ಕೆ ಇಲಾಖೆಯಿಂದ ಅನುಮೋದನೆ ದೊರೆಯವುದು ವಿಳಂಬವಾದ ಹಿನ್ನೆಲೆ ತಡವಾಗಿದೆ ಎಂದರು.
ಜಿಲ್ಲಾಧಿಕಾರಿಗಳು ಸೂಚಿಸಿದಂತೆ ಸೋಮವಾರದಂದು ಕಾಮಗಾರಿ ಆರಂಭಗೊಳ್ಳಲೇ ಬೇಕು. ನಾಳೆಯೆ ಕಾಮಗಾರಿಯ ನೀಲಿ ನಕಾಶೆಯನ್ನು ಅಳವಡಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದರು. ಅದಕ್ಕೆ ಅವರು ಒಪ್ಪಿಗೆ ಸೂಚಿಸಿದರು.

ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಹಲವು ಸಮಯಗಳ ಬೇಡಿಕೆ ಇದಾಗಿದೆ. 39 ಕೋಟಿಯ ಕಾಮಗಾರಿಯನ್ನು 23 ಕೋಟಿಗೆ ತೆಗೆದುಕೊಂಡಿದ್ದಾರೆ. ಕಡಿಮೆ ಹಣಕ್ಕೆ ಕಾಮಗಾರಿ ಕೈಗೆತ್ತಿಕೊಂಡಿದ್ದಾರೆ ಎಂದು ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಗುಣಮಟ್ಟ ನೀಡಲೇಬೇಕು. ಏನೆ ಸಮಸ್ಯೆ ಬಂದರೂ ಸಂಸದರೊಂದಿಗೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೆತ್ತಿಕೊಳ್ಳುತ್ತೇವೆ. ಸಂತೆಕಟ್ಟೆಯಲ್ಲಿ ಕೂಡ ಸಾಕಷ್ಟು ವಿಳಂಬವಾಗಿದೆ. ಮೊದಲು ಬಂಡೆ ಬಂತು. ಈಗ ನೀರಿನ ಒರತೆ ಬಂತು ಎಂದು ವಿಳಂಬ ಮಾಡುತ್ತಿದ್ದಾರೆ. ಮೊದಲೇ ಎಲ್ಲಾ ರೀತಿಯ ಪರೀಕ್ಷೆ ಮಾಡಿ ಕೆಲಸ ಆರಂಭಿಸಬೇಕು ಎಂದು ಸೂಚಿಸಿದರು.
ಈ ಸಂದರ್ಭ ರಾ.ಹೆ ಪ್ರಾಧಿಕಾರದ ವಿವಿಧ ಅಧಿಕಾರಿಗಳು, ನಗರಾಡಳಿತದ ಅಧ್ಯಕ್ಷ ಪ್ರಭಾಕರ್ ಪೂಜಾರಿ ಸೇರಿದಂತೆ ವಿವಿಧ ಮುಖಂಡರು ಇದ್ದರು.