• August 23, 2025
  • Last Update August 21, 2025 9:01 pm
  • Australia

ಮಾಜಿ ಸಿಎಂ ಎಸ್‌ಎಂ ಕೃಷ್ಣ ಇನ್ನಿಲ್ಲ

ಮಾಜಿ ಸಿಎಂ ಎಸ್‌ಎಂ ಕೃಷ್ಣ ಇನ್ನಿಲ್ಲ

ಬೆಂಗಳೂರು: ಮಾಜಿ ಸಿಎಂ  ಎಸ್ಎಂ  ಕೃಷ್ಣ (92) ಬೆಳಗಿನ ಜಾವ  ಸುಮಾರು 2.45ಕ್ಕೆ  ಕೊನೆಯುಸಿರೆಳೆದಿದ್ದಾರೆ.  ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದು ವಾಪಾಸಾಗಿದ್ದರು. ಇಂದು ಡಿ.10ರ ಬೆಳಗ್ಗೆ  ಸದಾಶಿವನಗರದ ನಿವಾಸದಲ್ಲಿ  ಎಸ್ಎಂ ಕೃಷ್ಣ ನಿಧನರಾಗಿದ್ದಾರೆ.

ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡರಾಗಿದ್ದ ಅವರು, ರಾಜ್ಯ ಮತ್ತು ರಾಷ್ಟ್ರ  ರಾಜಕಾರಣದಲ್ಲಿ  ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದ ಅವರು, ರಾಜಕೀಯ ಜೀವನದ ಕೊನೆಗಾಲದಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಗಾಂಧಿ ಕುಟುಂಬದ  ಅತ್ಯಾಪ್ತರಲ್ಲಿ  ಒಬ್ಬರಾಗಿದ್ದರು. ಸಭ್ಯ ರಾಜಕಾರಣಿ  ಎಂದೆ ಗುರುತಿಸಲಾಗಿದ್ದ ಎಸ್‌ಎಂ ಕೃಷ್ಣ, ಇವರ ಪೂರ್ಣ ಹೆಸರು ಸೋಮನಹಳ್ಳಿ ಮಲ್ಲಯ್ಯ ಕೃಷ್ಣ   ಮೇ 1, 1932 ರಂದು ಮಂಡ್ಯದಲ್ಲಿ ಜನಿಸಿದರು.

ಮೊದಲಿಗೆ ಪ್ರಜಾ ಸೋಷಲಿಸ್ಟ್ ಪಾರ್ಟಿ (1962 ರಿಂದ 1971), ಬಳಿಕ ಕಾಂಗ್ರೆಸ್‌ ಸೇರಿ (1971ರಿಂದ 2017) ಬಹುಕಾಲ ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು. ಕರ್ನಾಟಕ ರಾಜ್ಯದ 16ನೇ ಮುಖ್ಯಮಂತ್ರಿಯಾಗಿ, 1999-2004ರವರೆಗೆ ರಾಜ್ಯದ ಚುಕ್ಕಾಣಿ ಹಿಡಿದ್ದರು. ಬೆಂಗಳೂರನ್ನು ಐಟಿಸಿಟಿ ಮಾಡುವಲ್ಲಿ ಎಸ್‌ಎಂ ಕೃಷ್ಣ ಅವರ ಪಾತ್ರ ಬಹಳ ಹಿರಿದು. ಇವರ ಕಾಲದಲ್ಲಿ ಐಟಿ ಉದ್ಯಮಕ್ಕೆ ಸಾಕಷ್ಟು ಒತ್ತು ನೀಡಿದ್ದರು. ಇದರಿಂದ ಹಲವು ದೇಶಿ ವಿದೇಶಿ ಕಂಪೆನಿಗಳು ಬೆಂಗಳೂರನ್ನು ಐಟಿ ಹಬ್‌ ಅನ್ನಾಗಿ ಮಾಡಿಕೊಂಡವು.

ಯುಪಿಎ ಸರಕಾರದ ಅವಧಿಯಲ್ಲಿ ಮಹಾರಾಷ್ಟ್ರದ ರಾಜ್ಯಪಾಲರಾಗಿ, ವಿದೇಶಾಂಗ ಸಚಿವರಾಗಿ ಕೆಲಸ ಮಾಡಿದ್ದ ಅವರು ಅಮೂಲಾಗ್ರ ಬದಲಾವಣೆ ಮಾಡಿದ್ದಾರೆ. 2023ನೇ ಸಾಲಿನ ಪದ್ಮವಿಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೆಲ ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.
ಮೃತರು ಪತ್ನಿ ಪ್ರೇಮಾ, ಇಬ್ಬರು ಮಕ್ಕಳಾದ ಮಾಳವಿಕಾ ಕೃಷ್ಣ  ಮತ್ತು ಶಾಂಭವಿ ಕೃಷ್ಣ, ಮೊಮ್ಮಕ್ಕಳು, ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ. 

ಮೃತರ ಪಾರ್ಥಿವ ಶರೀರವನ್ನು ಸಾರ್ವಜನಿಕರ ಅಂತಿಮ ದರ್ಶನಕ್ಕೆ ಸದಾಸಶಿವನಗರದ ನಿವಾಸದಲ್ಲಿ ಇಂದು ಇಡೀ ದಿನ ಇಡಲಾಗುವುದು.  ಅವರ ಹುಟ್ಟೂರಾದ ಮಂಡ್ಯ ಜಿಲ್ಲೆ ಮದ್ದೂರಿನ ಸೋಮನಹಳ್ಳಿಯಲ್ಲಿ ನಾಳೆ ಬೆಳಗ್ಗೆ ಅಂತಿಮ ಕ್ರಿಯೆ ನೆರವೇರಿಸಲಾಗುವುದು ಎಂದು ಎಸ್ ಎಂ ಕೃಷ್ಣ ಅವರ ದೀರ್ಘಕಾಲದ ಒಡನಾಡಿಗಳು, ಸಂಬಂಧಿಗಳು ಆಗಿರುವ ಡಿಸಿಎಂ ಡಿ ಕೆ ಶಿವಕುಮಾರ್ ಅವರು ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಸಂತಾಪ
ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸಾವಿನಿಂದ ಆಘಾತಕ್ಕೀಡಾಗಿದ್ದೇನೆ. ರಾಜ್ಯ ಮತ್ತು ಕೇಂದ್ರ ಸಚಿವರಾಗಿ ಹಾಗೂ ಮುಖ್ಯಮಂತ್ರಿಯಾಗಿ ಕೃಷ್ಣ ಅವರು ಸಲ್ಲಿಸಿರುವ ಸೇವೆ ಅನುಪಮವಾದುದು. ವಿಶೇಷವಾಗಿ  ಮುಖ್ಯಮಂತ್ರಿಯಾಗಿ ಐಟಿ-ಬಿಟಿ ಕ್ಷೇತ್ರದ ಬೆಳವಣಿಗೆಗೆ ಅವರು ನೀಡಿರುವ ಕೊಡುಗೆಗಾಗಿ ಕರ್ನಾಟಕ ಸದಾ ಋಣಿಯಾಗಿರುತ್ತದೆ.

ಮುತ್ಸದ್ದಿ ರಾಜಕಾರಣಿಯಾಗಿದ್ದ ಕೃಷ್ಣ ಅವರು ಅಜಾತಶತ್ರುಗಳಾಗಿದ್ದರು. ನಾನು ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಪ್ರಾರಂಭದ ದಿನಗಳಲ್ಲಿ‌ ನನಗೆ ಮಾರ್ಗದರ್ಶಕರಾಗಿದ್ದ ಕೃಷ್ಣ ಅವರು ಸದಾ ನನ್ನ ಹಿತೈಷಿಗಳಾಗಿದ್ದರು. ಕೃಷ್ಣ ಅವರ ದೂರದರ್ಶಿತ್ವ, ಶಿಸ್ತುಬದ್ಧ ಜೀವನ, ಸಜ್ಜನಿಕೆಯ ನಡವಳಿಕೆ ಮತ್ತು ಅಧ್ಯಯನಶೀಲ ಪ್ರವೃತ್ತಿ ಉದಯೋನ್ಮಖ ರಾಜಕಾರಣಿಗಳಿಗೆ ಮಾದರಿಯಾಗಿದೆ.

ಅವರ ಅಗಲಿಕೆಯಿಂದ ನೊಂದಿರುವ ಅವರ ಕುಟುಂಬವರ್ಗ ಮತ್ತು ಅಭಿಮಾನಿಗಳ ದು:ಖದಲ್ಲಿ‌ ನಾನೂ  ಭಾಗಿಯಾಗಿದ್ದೇನೆ.‌ ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೋರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಸಂತಾಪ ಸೂಚಿಸಿದ್ದಾರೆ.

ಕೆ ಜಯಪ್ರಕಾಶ್‌ ಹೆಗ್ಡೆ ಸಂತಾಪ

1999ರಲ್ಲಿ ನಾನು ಪಕ್ಷೇತರನಾಗಿ ಸ್ಪರ್ಧಿಸಿದ್ದ ಸಂದರ್ಭ ಅಂದು ಅವರು ನನ್ನಲ್ಲಿ ಬೆಂಬಲವನ್ನು ಕೋರಿದ್ದರು, ಆದರೆ ಅವರಿಗೆ ಅಂದು ಬೇಕಾದ ಸೀಟುಗಳು ದಕ್ಕಿತ್ತು. ಆ ಬಳಿಕ ನಾವು ವಿರೋಧ ಪಕ್ಷದಲ್ಲಿದ್ದರೂ, ನಮ್ಮ ಕ್ಷೇತ್ರಕ್ಕೆ ಬೇಕಾದ ಎಲ್ಲಾ ರೀತಿಯ ಕೆಲಸಗಳನ್ನು ಮಾಡಿಕೊಟ್ಟಿದ್ದರು. ಅವರು ರಾಜ್ಯವನ್ನು ಮುನ್ನಡೆಸಿದ ರೀತಿ ಎಲ್ಲರಿಗೂ ಮಾದರಿ. ಬೆಂಗಳೂರಿನ ಅಭಿವೃದ್ಧಿಯ ಹರಿಕಾರ, ಐಟಿಬಿಟಿಯಲ್ಲಿ ಅಭಿವೃದ್ಧಿ ಇದೆ ಎಂದು ಕಂಡುಕೊಂಡ ಅವರು, ಐಟಿಬಿಟಿ ಕ್ಷೇತ್ರಕ್ಕೆ ಪೂರ್ಣ ಕುಂಭ ಸ್ವಾಗತ ನೀಡಿದ್ದರು. ಅವರ ಮುನ್ನುಡಿಯಿಂದ ಇಂದು ಬೆಂಗಳೂರು ಐಟಿ ಹಬ್‌ ಆಗಿ ಬೆಳೆದಿದೆ.  ಅವರ ಅವಧಿಯಲ್ಲಿ ವಿಧಾನಸಭೆ ಆಡಳಿತಕ್ಕೆ ಸಂಬಂಧಿಸಿದ ಚರ್ಚೆಗಳು ನಡೆಯುತ್ತಿತ್ತೇ ಹೊರತು ವೈಯುಕ್ತಿಕ ವಿಚಾರಗಳ ಚರ್ಚೆಗೆ ಅವಕಾಶವೇ ಇರಲಿಲ್ಲ. ಆ ರೀತಿಯಲ್ಲಿ ಅವರು ಸಭೆಯನ್ನು ಮುನ್ನಡೆಸಿದ್ದರು. ಸಭ್ಯ ರಾಜಕಾರಣಿಯಾಗಿದ್ದ ಅವರ ನಿಧನ ಎನ್ನುವುದು ತುಂಬಲಾರದ ನಷ್ಟ ಅವರ ಕುಟುಂಬಕ್ಕೆ ಅವರ ಅಗಲಿಕೆಯ ದುಃಖ ಸಹಿಸುವ ಶಕ್ತಿ ನೀಡಲಿ, ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಭಗವಂತನಲ್ಲಿ ಕೋರುತ್ತೇನೆ ಎಂದು ಮಾಜಿ ಸಂಸದ ಕೆ. ಜಯಪ್ರಕಾಶ್‌ ಹೆಗ್ಡೆ  ಸಂತಾಪ ಸೂಚಿಸಿದ್ದಾರೆ.  

administrator

Related Articles

Leave a Reply

Your email address will not be published. Required fields are marked *

error: Content is protected !!