ಸಾಲಿಗ್ರಾಮ: ಉರಗ ಸಂರಕ್ಷಕ ಸುಧೀಂದ್ರ ಐತಾಳ್ ಪುತ್ರ ಧೀರಜ್ ಐತಾಳ್‌ಗೆ ಕರ್ನಾಟಕ ಸರಕಾರ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದೆ.
ಬೆಂಗಳೂರಿನ ಕಬ್ಬನ್ ಪಾರ್ಕ್‌ನಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ನಡೆದ ಸಮಾರಂಭದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ 80ಕ್ಕೂ ಅಧಿಕ ಹೆಬ್ಬಾವು ನಾಗರಹಾವುಗಳನ್ನು ಹಿಡಿದಿರುವ ಧೀರಜ್, ಚಿಕ್ಕ ವಯಸ್ಸಿನಲ್ಲಿ ಹೆಬ್ಬಾವನ್ನು ಹಿಡಿಯುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಇವನ ಈ ಕೆಲಸಕ್ಕೆ ಸಾಕಷ್ಟು ಪ್ರಶಂಸೆ ಕೂಡ ಬಂದಿದ್ದು, ಅಲ್ಲದೆ 2024ರ ನೆರೆ ಹಾವಳಿ ಸಂದರ್ಭ ಹಲವಾರು ಮನೆಗಳಿಗೆ ಹೆಬ್ಬಾವು ನುಗ್ಗಿದ್ದು, ಈ ಚಿಕ್ಕ ಬಾಲಕ ಧೀರಜ್ 20ಕ್ಕೂ ಅಧಿಕ ಹೆಬ್ಬಾವುಗಳನ್ನು ಏಕಾಂಗಿಯಾಗಿ ಹಿಡಿದಿರುವುದು ಇವನ ಸಾಧನೆಯಾಗಿದೆ.
ಚಿತ್ರಪಾಡಿ ಸರಕಾರಿ ಶಾಲೆಯಲ್ಲಿ ಕಲಿತಿರುವ ಧೀರಜ್ ಈಗ ಕೋಟ ವಿವೇಕ ಪದವಿಪೂರ್ವ ಕಾಲೇಜಿನಲ್ಲಿ 8ನೇತರಗತಿ ಕಲಿಯುತ್ತಿದ್ದಾನೆ.
ತಂದೆಯಂತೆ ಮಗ
ಪ್ರಾಣಿ ಸಂರಕ್ಷಣೆ ಬಗ್ಗೆ ಅತೀವ ಆಸಕ್ತರಾಗಿರುವ ಧೀರಜ್ ತಂದೆ ಸುದೀಂದ್ರ ಐತಾಳ್, ಸಂಕಷ್ಟದಲ್ಲಿರುವ ಹಲವಾರು ಪ್ರಾಣಿ ಪಕ್ಷಿಗಳನ್ನು ತಂದು ಚಿಕಿತ್ಸೆ ನೀಡಿ ಗುಣಪಡಿಸಿದ್ದಾರೆ. ಸಾಲಿಗ್ರಾಮ ಸುತ್ತಮುತ್ತ ಎಲ್ಲಾ ಹಾವುಗಳು ಕಾಣಿಸಿಕೊಂಡರೆ ಅಥವಾ ಪೆಟ್ಟಾಗಿ ಸಂಕಷ್ಟದಲ್ಲಿದ್ದರೆ ಸುಧೀಂದ್ರ ಐತಾಳ್ ಅಲ್ಲಿ ಹಾಜರಿದ್ದು ಸಂರಕ್ಷಣೆ ಮಾಡುತ್ತಾರೆ. ಸುಧೀಂದ್ರ ಐತಾಳ್ ಅವರ ಅಣ್ಣ ರವೀಂದ್ರ ಐತಾಳ್ ಕೂಡ ಪುತ್ತೂರಿನಲ್ಲಿ ಖ್ಯಾತ ಉರಗ ಸಂರಕ್ಷಕರು. ಇವೆರೆಲ್ಲರ ಪ್ರೇರಣೆಯಿಂದ ಧೀರಜ್ ಕೂಡ ಯಾವುದೇ ಭಯವಿಲ್ಲದೆ ಹಾವುಗಳನ್ನು ಹಿಡಿಯುತ್ತಿದ್ದಾನೆ.