ಉಡುಪಿ: ಗಣಿ ಇಲಾಖೆಯ ಜಿಲ್ಲಾ ಮುಖ್ಯಕಚೇರಿ ನಿರ್ಮಾಣಗೊಂಡು ಎರಡು ವರ್ಷ ಕಳೆದರೂ ಇನ್ನೂ ಉದ್ಘಾಟನಾ ಭಾಗ್ಯವನ್ನು ಕಂಡಿಲ್ಲ.
ದೊಡ್ಡಣಗುಡ್ಡೆ ಚಕ್ರಕೆರೆ ಸಮೀಪ, ನಿರ್ಮಿತಿ ಕೇಂದ್ರದಿಂದ 2ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಎರಡು ಮಹಡಿಯ ಈ ಕಟ್ಟಡಕ್ಕೆ ಎರಡು ವರ್ಷಗಳಿಂದ ಉದ್ಘಾಟನಾ ಭಾಗ್ಯ ಸಿಕ್ಕಿಲ್ಲ.
ಮೂಲಗಳ ಪ್ರಕಾರ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸ್ವತಃ ಬಂದು ಉದ್ಘಾಟನೆ ಮಾಡುವುದಾಗಿ ತಿಳಿಸಿದ್ದು ಈ ಹಿನ್ನೆಲೆ ವಿಳಂಬವಾಗಿದೆ ಎಂದು ತಿಳಿದುಬಂದಿದೆ.

ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಮಂತ್ರಿಗಳಾದ ಎಸ್ ಎಸ್ ಮಲ್ಲಿಕಾರ್ಜುನ ಅವರಲ್ಲಿ ಹಲವು ಬಾರಿ ಉದ್ಘಾಟನೆಗೆ ದಿನಾಂಕ ನಿಗದಿಪಡಿಸಲಾಗಿತ್ತು. ಆದರೆ ಅವರ ಕಾರ್ಯದೊತ್ತಡದಿಂದ ಉದ್ಘಾಟನೆಗೆ ಇನ್ನೂ ಸಮಯ ನಿಗದಿಪಡಿಸಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮೂಲಕವಾದರೂ ಉದ್ಘಾಟನೆ ನಡೆಸುವುದಕ್ಕೆ ಅಧಿಕಾರಿಗಳು ಹೊರಟರೂ; ಅದಕ್ಕೂ ಗಣಿ ಸಚಿವರು ತಡೆಯೊಡ್ಡಿದ್ದಾರೆ ಎಂದು ತಿಳಿದುಬಂದಿದೆ. ಇದರಿಂದಾಗಿ ಕಳೆದ ಎರಡು ವರ್ಷಗಳಿಂದ ಕಟ್ಟಡ ನಿರ್ಮಾಣಗೊಂಡರೂ ಉದ್ಘಾಟನೆಗೆ ಮುಹೂರ್ತ ನಿಗದಿಯಾಗಿಲ್ಲ.
ಈಗಾಗಲೇ ಕಟ್ಟಡದಲ್ಲಿರುವ ಹಲವು ವಸ್ತುಗಳು ಕಳವಿಗೆ ಯತ್ನಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದ್ದು, ಆ ಬಳಿಕ ಸಿಸಿಟಿವಿ ಅಳವಡಿಸಲಾಗಿದೆ ಎಂದು ತಿಳಿದುಬಂದಿದೆ.
ಹೊಸ ಕಟ್ಟಡವೊಂದು ಗಿಡಗಂಟಿಗಳು ಬೆಳೆದು ಪಾಳುಬಿದ್ದ ಕಟ್ಟಡವಾಗುವಲ್ಲಿದೆ. ಇನ್ನಾದರೂ ಗಣಿ ಸಚಿವರು ಮನಸ್ಸು ಮಾಡಿ ಈ ಕಟ್ಟಡವನ್ನು ಉದ್ಘಾಟಿಸಿ, ಸಾರ್ವಜನಿಕ ಬಳಕೆಗೆ ಸಿಗಬೇಕು ಎನ್ನುವುದು ಸಾರ್ವಜನಿಕರ ಆಗ್ರಹ.
ಎರಡು ವರ್ಷದಿಂದ ಸರಕಾರಿ ಕಟ್ಟಡವೊಂದು ಪಾಳುಬಿದ್ದಿರುವುದು ನಿಜಕ್ಕೂ ನಾಚಿಕೆಗೇಡು. ಸರಕಾರ ಇನ್ನಾದರೂ ಇದಕ್ಕೆ ಉದ್ಘಾಟನೆ ಭಾಗ್ಯ ನೀಡಿ ಸಾರ್ವಜನಿಕ ಬಳಕೆಗೆ ಸಿಗುವಂತೆ ಮಾಡಬೇಕು. –ನಿತ್ಯಾನಂದ ಒಳಕಾಡು, ಸಾಮಾಜಿಕ ಕಾರ್ಯಕರ್ತರು