• August 23, 2025
  • Last Update August 21, 2025 9:01 pm
  • Australia

ಹೋರಾಟಗಾರ ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

ಹೋರಾಟಗಾರ ಹನುಮಂತ ಕಾಮತ್‌ಗೆ ಕಾರಾಗೃಹ ಶಿಕ್ಷೆ

ಮಂಗಳೂರು: ನ್ಯಾಯಾಲಯವು ಹೊರಡಿಸಿದ ತಾತ್ಕಾಲಿಕ ನಿರ್ಬಂಧಕಾಜ್ಞೆಯ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘನೆ ಮಾಡಿರುವ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ವಿಚಾರಣೆ ನಡೆಸಿ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಂಗಳೂರಿನ ಸಿವಿಲ್ ನ್ಯಾಯಾಧೀಶ ರಾಮಲಿಂಗಪ್ಪ ಅವರು ತಪ್ಪಿತಸ್ಥ ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್‌ರಿಗೆ 90ದಿನಗಳ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದ್ದಾರೆ.

ಮಂಗಳೂರಿನ ವಿ.ಟಿ.ರಸ್ತೆಯಲ್ಲಿರುವ ಶ್ರೀವಿಠೋಬ ರುಕುಮಾಯಿ ದೇವರ ಭಂಡಾರದ ದಿನನಿತ್ಯದ ಆಡಳಿತಾತ್ಮಕ ವ್ಯವಹಾರದಲ್ಲಿ ಹಸ್ತಕ್ಷೇಪಮಾಡಬಾರದು. ಟ್ರಸ್ಟಿ ಎಂದು ತನ್ನನ್ನು ತಾನು ಪ್ರತಿಪಾದಿಸಬಾರದು ಎಂದು ಹನುಮಂತ ಕಾಮತ್ ಎಂಬವರ ವಿರುದ್ಧ ತಾತ್ಕಾಲಿಕ ನಿರ್ಬಂಧಕಾಜ್ಞೆ ಕೋರಿ ದೇವರ ಭಂಡಾರದ ಟ್ರಸ್ಟಿ ಎಂ ವರದಾಯ ಪ್ರಭು ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯವು ಹನುಮಂತ ಕಾಮತ್ ವಿರುದ್ಧ ತಾತ್ಕಾಲಿಕ ನಿರ್ಬಂಧಕಾಜ್ಞೆಯ ಆದೇಶವನ್ನು ಹೊರಡಿಸಿತ್ತು.

ಸದರಿ ಆದೇಶದ ವಿರುದ್ಧ ಹನುಮಂತ ಕಾಮತ್ ಸಲ್ಲಿಸಿದ ಮೇಲ್ಮನವಿ ತಿರಸ್ಕೃತವಾಗಿತ್ತು. ಬಳಿಕ ಉಚ್ಚ ನ್ಯಾಯಾಲಯದಲ್ಲಿ ಸಲ್ಲಿಸಿದ ರಿಟ್ ಅರ್ಜಿಯಲ್ಲಿ ಯಾವುದೇ ತಡೆಯಾಜ್ಞೆಯನ್ನು ಹೈಕೋರ್ಟ್ ನೀಡಿಲ್ಲ. ಆದರೆ ಹನುಮಂತ ಕಾಮತ್ ನ್ಯಾಯಾಲಯದ ಆದೇಶ ಉಲ್ಲಂಘಿಸಿ ತಾನೇ ಭಂಡಾರದ ಟ್ರಸ್ಟಿ ಎಂದು ಘೋಷಣೆ ಮಾಡಿಕೊಂಡು ದಿನನಿತ್ಯದ ವ್ಯವಹಾರದಲ್ಲಿ ಭಾಗವಹಿಸುತ್ತಿದ್ದರು. 2018ರ ಮಾರ್ಚ್ 30ರಂದು ತುಳುನಾಡು ಸುದ್ದಿ ಪತ್ರಿಕೆಯಲ್ಲಿ ಪತ್ರಿಕಾ ಪ್ರಕಟಣೆ ಹೊರಡಿಸಿ ತಾನೇ ಟ್ರಸ್ಟಿ ಎಂದು ಹೇಳಿಕೊಂಡಿದ್ದರು.

ಹನುಮಂತ ಕಾಮತ್ ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಉಲ್ಲಂಘಿಸುತ್ತಿದ್ದಾರೆ ಎಂದು ಆರೋಪಿಸಿ ಎಂದು ಕೋರಿ ಎಂ.ವರದಾಯ ಪ್ರಭು ನ್ಯಾಯಾಂಗ ನಿಂದನಾ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಹನುಮಂತ ಕಾಮತ್ ಉದ್ದೇಶಪೂರ್ವಕವಾಗಿ ತಾತ್ಕಾಲಿಕ ನಿರ್ಬಂಧಕಾಜ್ಞೆ ಆದೇಶವನ್ನು ಉಲ್ಲಂಘಿಸಿದ್ದಾರೆ.‌ ಆದ್ದರಿಂದ ತಪ್ಪಿತಸ್ಥರೆಂದು ನಿರ್ಣಯಿಸಿ ಹನುಮಂತ ಕಾಮತ್ ಅವರು 90 ದಿನಗಳವರೆಗೆ ಸಿವಿಲ್ ಬಂಧೀಖಾನೆಗೆ ಒಳಪಡಲು ಬಾಧ್ಯಸ್ತರಾಗಿರುತ್ತಾರೆ ಎಂದು ನ್ಯಾಯಾಲಯ ಆದೇಶಿಸಿದೆ.

ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿ ಪಿ. ರಂಜನ್ ರಾವ್ ವಾದಿಸಿದರು.

administrator

Related Articles

Leave a Reply

Your email address will not be published. Required fields are marked *

error: Content is protected !!