ಮಂಗಳೂರು: ಇಲ್ಲಿನ ತೋಟ ಬೆಂಗ್ರೆಯ ಅಳಿವೆ ಬಾಗಿಲಿನಲ್ಲಿ ಅಕ್ರಮ ಮರಳುಗಾರಿಕೆ ಎಗ್ಗಿಲ್ಲದೆ ನಡೆಯುತ್ತಿದೆ. ರವಿವಾರ ನಸುಕಿನ ವೇಳೆ ಮರಳುಗಾರಿಕೆಯಲ್ಲಿ ನಿರತರಾಗಿದ್ದವರನ್ನು ಪ್ರಶ್ನಿಸಿದ ಸ್ಥಳೀಯ ಮೀನುಗಾರ ಯುವಕನೊಬ್ಬನಿಗೆ ಗಂಭೀರವಾಗಿ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.
ನಸುಕಿನ ವೇಳೆ 2ಗಂಟೆಯ ಸುಮಾರಿಗೆ ಸ್ಥಳೀಯ ಮೀನುಗಾರರು ಮೀನುಗಾರಿಕೆಗೆಂದು ತೋಟ ಬೆಂಗ್ರೆಯ ಅಳಿವೆ ಬಾಗಿಲಿನ ಕಡೆಗೆ ತೆರಳಿದ್ದರು. ಈ ವೇಳೆ ನೂರಾರು ಗೋಣಿಚೀಲಗಳಲ್ಲಿ ಮರಳು ಸಂಗ್ರಹಿಸಿರುವುದು, ಖಾಲಿ ಗೋಣಿಚೀಲಗಳನ್ನು ತಂದಿಟ್ಟಿರುವುದು ಕಂಡುಬಂದಿದೆ. ಆದ್ದರಿಂದ ಮೀನುಗಾರರು ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರನ್ನು ಪ್ರಶ್ನಿಸಿದ್ದಾರೆ. ಆಗ ಸುಮಾರು 15ಮಂದಿಯ ತಂಡ ಹಲ್ಲೆಗೆ ಮುಂದಾಗಿದೆ. ಕೆಲವು ಮೀನುಗಾರರು ಈ ವೇಳೆ ತಪ್ಪಿಸಿಕೊಂಡು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಓರ್ವ ಯುವಕನಿಗೆ ಹಾರೆಯಿಂದ ಬಲವಾದ ಹೊಡೆತ ಬಿದ್ದಿದ್ದು, ಆತನ ಬೆನ್ನು ಕಣ್ಣು ಮತ್ತು ಮುಖಕ್ಕೆ ಗಂಭೀರ ಗಾಯಗಳಾಗಿವೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಫಲ್ಗುಣಿ ಮತ್ತು ನೇತ್ರಾವತಿ ನದಿಗಳು ಸಮುದ್ರ ಸಂಗಮ ಸ್ಥಳದಲ್ಲಿ ಮರಳುಗಾರಿಕೆಗೆ ಅವಕಾಶವಿಲ್ಲ. ಆದಾರೂ ಕಳೆದ ಸುಮಾರು ಒಂದೂವರೆ ವರ್ಷದಿಂದ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದೆ. ಹೊರಭಾಗದ ಕೆಲವರು ಇಲ್ಲಿ ರಾತ್ರಿ ಮರಳು ಸಂಗ್ರಹಿಸಿ ಬೋಟ್‌ಗಳ ಮೂಲಕ ಕೇರಳಕ್ಕೆ ಸಾಗಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆ.
ಮರಳು ಮಾಫಿಯಾದ ಬಗ್ಗೆ ಪೊಲೀಸರು, ಗಣಿ ಮತ್ತು ಭೂವಿಜ್ಞಾನ ಇಲಾಖೆಗೆ ದೂರು ನೀಡಲಾಗಿದೆ. ಆದರೂ ಅಕ್ರಮ ಮರಳುಗಾರಿಕೆ ಮುಂದುವರಿದಿದೆ. ಮರಳುಗಾರಿಕೆಯಿಂದ ಅಳಿವೆಬಾಗಿಲಿಗೆ ಹಾನಿಯಾಗುತ್ತಿದ್ದು, ಮೀನುಗಾರಿಕ ಬೋಟ್‌ಗಳ ಚಲನೆಗೆ ತೊಂದರೆಯಾಗಿದೆ ಎಂದು ಮೀನುಗಾರರು ದೂರುತ್ತಿದ್ದಾರೆ.