ಉಡುಪಿ: ಸತತವಾಗಿ ಉಡುಪಿ ಜಿಲ್ಲೆಯ ಹಿಂದೂ ಸಂಘಟನೆ, ಬಿಜೆಪಿ ಕಾರ್ಯಕರ್ತರನ್ನು ಗುರಿಯಾಗಿಸಿಕೊಂಡು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಜನವಿರೋಧಿ ನೀತಿ ಅನುಸರಿಸುತ್ತಿರುವುದನ್ನು ವಿರೋಧಿಸಿ, ಹಿಂದೂಜಾಗರಣ ವೇದಿಕೆ ನೇತೃತ್ವದಲ್ಲಿ ಕರೆ ಕೊಟ್ಟಿರುವ ಉಡುಪಿ ಜಿಲ್ಲಾ ಎಸ್ಪಿ ಕಚೇರಿ ಮುತ್ತಿಗೆಗೆ ಬಿಜೆಪಿ ಯುವಮೋರ್ಚಾ ಬೆಂಬಲ ನೀಡಲಿದೆ ಎಂದು ಯುವಮೋರ್ಚಾ ಜಿಲ್ಲಾಧ್ಯಕ್ಷ ಬಿಲ್ಲಾಡಿ ಪ್ರಥ್ವಿರಾಜ್ ಶೆಟ್ಟಿ ತಿಳಿಸಿದ್ದಾರೆ.
ರಾಜ್ಯ ಸರಕಾರ ಬಿಜೆಪಿ ಮತ್ತು ಹಿಂದೂ ಸಂಘಟನೆಗಳ ವಿರುದ್ಧ ನಿರಂತರವಾಗಿ ಪ್ರಕರಣ ದಾಖಲಿಸುತ್ತಾ ಬಂದಿದೆ. ಸಿದ್ದರಾಮಯ್ಯ ವಿರುದ್ದ ಯುವಮೋರ್ಚಾ ನಡೆಸಿದ ಪ್ರತಿಭಟನೆಯಲ್ಲಿ ಉಡುಪಿ ಶಾಸಕ ಯಶ್ಪಲ್ ಸುವರ್ಣ ಸೇರಿದಂತೆ ಯುವ ಕಾರ್ಯಕರ್ತರ ಮೇಲೆ ಕೇಸು, ಲಾರಿ ಗೂಡ್ಸ್ ಮಾಲೀಕರ ಮೇಲೆ ಅನಗತ್ಯ ಕೇಸು, ಅದೇ ರೀತಿ ಗುಂಡ್ಯದಲ್ಲಿ ಕಸ್ತೂರಿ ರಂಗನ್ ವರದಿ ವಿರುದ್ದ ಹೋರಾಟದಲ್ಲಿ ಶಾಸಕರಾದ ಗುರಿರಾಜ್ ಗಂಟಿಹೊಳೆ, ಭಾಗಿರಥಿ ಮುರುಳ್ಯ ವಿರುದ್ದ ಕೇಸ್ ದಾಖಲಿಸಿ ಪ್ರತಿಭಟನೆಯ ಹಕ್ಕು ಕಸಿದಿದೆ.
ಉಡುಪಿ ಜಿಲ್ಲೆಯಲ್ಲಿ ರಾಜ್ಯ ಸರಕಾರದ ಇಶಾರೆಯಂತೆ ಉಡುಪಿ ಎಸ್ಪಿ ಕೂಡ ಕುಣಿಯುತ್ತಿದ್ದಾರೆ. ಹಿಂದೂ ಕಾರ್ಯಕರ್ತರ ವಿರುದ್ಧ ಅನಗತ್ಯವಾಗಿ ಪ್ರಕರಣ ದಾಖಲಿಸಿ ಹಿಂದೂ ಸಂಘಟನೆಗಳ ಬಲ ಕುಗ್ಗಿಸುವ ಕೆಲಸ ಮಾಡಲಾಗುತ್ತಿದ್ದಾರೆ. ಆದ್ದರಿಂದ ನ.25ರಂದು ವಿಹಿಂಪ ಕರೆ ನೀಡಿದ ಜನಾಗ್ರಹ ಸಭೆ ಮತ್ತು ಎಸ್ಪಿ ಕಚೇರಿ ಮುತ್ತಿಗೆಗೆ ಜಿಲ್ಲೆಯ ಯುವಮೋರ್ಚಾ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಲಿದ್ದೇವೆ. ಮುಂದೆ ಪ್ರತಿಭಟಿಸುವ ಹಕ್ಕನ್ನು ಹತ್ತಿಕ್ಕುವ ಪ್ರಯತ್ನ ನಿಲ್ಲದೇ ಹೋದಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ನಡೆಯಲಿದೆ ಎಂದು ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದರು.