• August 23, 2025
  • Last Update August 21, 2025 9:01 pm
  • Australia

ಸಿಎನ್‌ಜಿ: ಮೂಲಭೂತ ಸೌಕರ್ಯ ಹೆಚ್ಚಿಸಿಕೊಳ್ಳಿ- ಕೋಟ

ಸಿಎನ್‌ಜಿ: ಮೂಲಭೂತ ಸೌಕರ್ಯ ಹೆಚ್ಚಿಸಿಕೊಳ್ಳಿ- ಕೋಟ

ಉಡುಪಿ: ಉಡುಪಿ ಜಿಲ್ಲೆಯಲ್ಲಿ ಸಿಎನ್‌ಜಿ ವಿತರಣೆಯಲ್ಲಿ ಆಗುತ್ತಿರುವ ವ್ಯತ್ಯಯದ ಬಗ್ಗೆ ಸಾಕಷ್ಟು ದೂರುಗಳು ಬಂದ ಹಿನ್ನೆಲೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಜಿಲ್ಲಾಧಿಕಾರಿಗಳು ಮತ್ತು ವಿತರಕ ಸಂಸ್ಥೆಗಳು ಮತ್ತು ಸಿಎನ್‌ಜಿ ಗ್ಯಾಸ್‌ ಬಂಕ್‌ಗಳ ಮಾಲೀಕರ ಸಭೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜರಗಿತು.

ಈ ಸಂದರ್ಭ ಮಾತನಾಡಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಈ ಹಿಂದೆ ಕೂಡ ಹಲವು ಭಾರಿ ಸಮಸ್ಯೆಗಳು ಉಂಟಾಗಿತ್ತು. ಇನ್ನೂ ಕೂಡ ಮುಂದುವರಿಯುತ್ತಿದೆ ಇದಕ್ಕೆ ಕಾರಣ ಕೇಳಿದರು.

ಈ ಕುರಿತು ಉತ್ತರಿಸಿದ ಅದಾನಿ ಪವರ್ಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ ಆಳ್ವ, ಮಂಗಳೂರಿನ ಪಣಂಬೂರಿನಲ್ಲಿ ಕೆಐಓಸಿಯ ಸ್ಥಳದಲ್ಲಿ ಪೈಪ್‌ಲೈನ್‌ ಹಾದುಹೋಗಬೇಕಿದೆ. ಇದಕ್ಕೆ ಅವರು ಅನುಮತಿ ನೀಡಲು ನಿರಾಕರಿಸುತ್ತಿರುವುದರಿಂದ ಪೈಪ್‌ಲೈನ್‌ ಮೂಲಕ ನೀಡಲು ಸಾಧ್ಯವಾಗುತ್ತಿಲ್ಲ. ಈಗ ವಾಹನಗಳ ಮೂಲಕ ಸಾಗಾಟ ಮಾಡಲಾಗುತ್ತಿದೆ. ಇಲ್ಲಿ ಕೆಲವೊಂದು ತಾಂತ್ರಿಕ ಸಮಸ್ಯೆಗಳು ಇರುವುದರಿಂದ ವಿಳಂಬವಾಗುತ್ತಿದೆ. ಪೈಪ್‌ಲೈನ್‌ ಅಳವಡಿಕೆಗೆ ಈಗಾಗಲೇ ಪೆಟ್ರೋಲಿಯಂ ಸಚಿವಾಲಯಕ್ಕೆ ಪತ್ರ ಮುಖೇನ ಸಮಸ್ಯೆಯ ವರದಿ ಮಾಡಲಾಗಿದೆ. ಅವರು ಈ ಕುರಿತು ಕಾರ್ಯಪ್ರವರ್ತರಾಗಿದ್ದಾರೆ ಎಂದರು.

ಇದಕ್ಕೆ ಪ್ರತ್ಯುತ್ತರ ನೀಡಿದ ಸಂಸದರು, ಉಡುಪಿ ಜಿಲ್ಲೆಯಲ್ಲಿ 10 ಸಿಎನ್‌ಜಿ ಬಂಕ್‌ಗಳಿದೆ. ಅದರಲ್ಲಿ ಎರಡು ಕಾರ್ಯ ನಿರ್ವಹಿಸುತ್ತಿದೆ. ಪ್ರತಿನಿತ್ಯ 20500 ಕಿಲೋ ಸಿಎನ್‌ಜಿಯ ಅವಶ್ಯಕತೆ ಇದೆ. ಆದರೆ ಸಪ್ಲೆ ಆಗ್ತಾ ಇರೋದು 12000 ಕೆಜಿ ಈ ಸಮಸ್ಯೆಗೆ ಕಾರಣ ಏನು ಎಂದು ಪ್ರಶ್ನಿಸಿದರು.

ಆಗ ಉತ್ತರಿಸಿದ ಸಿಎನ್‌ಜಿ ಬಂಕ್‌ ಮಾಲೀಕ ಬಿ.ಎನ್‌ ಶಂಕರ್‌ ಪೂಜಾರಿ, 8 ಬಂಕ್‌ಗಳಿಗೆ ಇಬ್ಬರು ಟೆಕ್ನೀಶೀಯನ್‌ ಇದ್ದಾರೆ. ಪ್ರತಿ ಬಂಕ್‌ಗೆ ಎರಡು ವಾಹನಗಳಂತೆ ವ್ಯವಸ್ಥೆ ಮಾಡಿದ್ದಲ್ಲಿ ಪೂರೈಕೆ ನಿಯಮಿತವಾಗಿರುತ್ತದೆ ಎಂದರು.

ಕುಂದಾಪುರ ಭಾಗದ ಸಿಎನ್‌ಜಿ ಬಂಕ್‌ನ ಮಾಲೀಕರೋರ್ವರು ಮಾತನಾಡಿ, ಸಿಟಿ ಭಾಗಗಳಲ್ಲಿ ಜಂಭೋ ವಾಹನದ ಮೂಲಕ ಪೂರೈಕೆ ಮಾಡಿದ್ದಲ್ಲಿ ಸಮಸ್ಯೆ ಸ್ವಲ್ಪ ಮಟ್ಟಿಗೆ ಸುಧಾರಿಸುತ್ತದೆ ಎಂದರು.

ಗುಂಡಿಬೈಲಿನ ತೇಜಸ್‌ ಪಾಲನ್‌ ಮಾತನಾಡಿ, ಇನ್ನು ಸೀಸನ್‌ಗಳು ಆರಂಭಗೊಂಡತೆ ಬೇಡಿಕೆ ಕೂಡ ಜಾಸ್ತಿ ಇರುತ್ತದೆ. ಒಂದೂವರೆ ಗಂಟೆಯೊಳಗೆ ಈಗ ಪೂರೈಕೆಯಾಗುತ್ತಿರುವ ಗ್ಯಾಸ್‌ ಖಾಲಿಯಾಗುತ್ತದೆ ಎಂದರು ಜೊತೆಗೆ ಅದಾನಿಯಿಂದ ಗ್ಯಾಸ್‌ ಪೂರೈಕೆಗೆ ಬಳಸುತ್ತಿರುವ ಗನ್‌ ಕೂಡ ಗುಣಮಟ್ಟದಾಗಿಲ್ಲ ಎಂದರು.

ಈ ಬಗ್ಗೆ ಮಾತನಾಡಿದ ಸಂಸದರು, ಕೂಡಲೇ ಗುಣಮಟ್ಟದ ಗನ್‌ ನೀಡಬೇಕೆಂದು ಮತ್ತು ಅಗತ್ಯ ಇರುವ ಹೆಚ್ಚುವರಿ ವಾಹನಗಳನ್ನು ವ್ಯವಸ್ಥೆ ಮಾಡಲು ಸೂಚಿಸಿದರು. ಬಳಿಕ ಮಾತನಾಡಿದ ಗೇಲ್‌ ಕಂಪೆನಿಯ ಪ್ರತಿನಿಧಿಗಳು ರಾತ್ರಿ ವೇಳೆ ಗ್ಯಾಸ್‌ ತುಂಬಿಸಿಕೊಂಡರೆ ಸಮಸ್ಯೆಯಾಗುವುದಿಲ್ಲ. ಅದಕ್ಕೆ ಬೇಕಾದ ವ್ಯವಸ್ಥೆಗಳನ್ನು ಅದಾನಿ ಕಂಪೆನಿಯವರು ಮಾಡಿಕೊಳ್ಳಬೇಕು ಎಂದರು.

ಈ ಸಂದರ್ಭ ಮಾತನಾಡಿದ ಬಂಕ್‌ ಮಾಲೀಕರೊಬ್ಬರು ಗೇಲ್ ಅವರ ಬಳಿ ಎರಡು ಗ್ಯಾಸ್‌ ಫಿಲ್ಲಿಂಗ್‌ ವ್ಯವಸ್ಥೆ ಇದೆ, ಅದರಲ್ಲಿ ಒಂದನ್ನು ಉಡುಪಿ ಭಾಗಕ್ಕೆ ಮೀಸಲಿಡುವಂತೆ ಕೋರಿದರು. ಅದಕ್ಕೆ ಆಕ್ಷೇಪಿಸಿದ ಗೇಲ್‌ ಕಂಪೆನಿಯ ಪ್ರತಿನಿಧಿ ಮಂಗಳೂರಿನಲ್ಲಿ 40ಸಾವಿರ ಕೆಜಿಗೂ ಮಿಕ್ಕಿ ಸಿಎನ್‌ಜಿ ಪೂರೈಕೆಯಾಗುತ್ತದೆ ಈ ಕಾರಣಕ್ಕೆ ಉಡುಪಿಗೆ ಪ್ರತ್ಯೇಕವಾಗಿ ಮೀಸಲಿಟ್ಟರೆ ಸಮಸ್ಯೆಯಾಗುತ್ತದೆ. ರಾತ್ರಿ ವೇಳೆ ಪೂರೈಕೆ ಮಾಡಿಕೊಂಡರೆ ಸಮಸ್ಯೆಯಾಗದು ಎಂದರು. ಇದಕ್ಕೆ ಪ್ರತ್ಯುತ್ತರ ನೀಡಿದ ಬಂಕ್‌ ಮಾಲೀಕರು ಕೆಲವೊಮ್ಮೆ ಬೇಗ ಖಾಲಿಯಾದರೆ ಮಂಗಳೂರಿನಿಂದ ಬರುವಾಗ ಸಮಸ್ಯೆಯಾಗುತ್ತದೆ ಎಂದರು. ಅದಕ್ಕೆ ಪ್ರತಿಕ್ರಿಯಿಸಿದ ಗೇಲ್‌ ಕಂಪೆನಿಯವರು ಅದಾನಿಯವರು ಅದಕ್ಕೆ ಬೇಕಾದ ವ್ಯವಸ್ಥೆ ಮಾಡಿಕೊಳ್ಳಬೇಕು ಎಂದರು.

ಕೊನೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಅದಾನಿ ಮತ್ತು ಗೇಲ್‌ ಕಂಪೆನಿಯವರು ಸೌಹಾರ್ಧಯುತವಾಗಿ ಸಮಸ್ಯೆಯನ್ನು ಬಗೆಹರಿಸಬೇಕು. ದೇಶದ ಎಲ್ಲೂ ಇಲ್ಲದ ಸಮಸ್ಯೆ ಉಡುಪಿಯಲ್ಲಿ ಆಗುತ್ತಾ ಇದೆ. ಇನ್ನು ಮುಂದೆ ಅದಾನಿಯವರು ಸಾರ್ವಜನಿಕರಿಗೆ ಯಾವುದೇ ಸಮಸ್ಯೆಯಾಗದ ರೀತಿಯಲ್ಲಿ ಪೂರೈಕೆಗೆ ಬೇಕಾದ ಮೂಲಭೂತ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸೂಚಿಸಿದರು.

ಈ ಸಂದರ್ಭ ಶಾಸಕ ಯಶಪಾಲ್‌ ಸುವರ್ಣ, ಜಿಲ್ಲಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ. ಅರುಣ್‌ ಕುಮಾರ್‌, ಜಿ.ಪಂ ಸಿಇಓ ಪ್ರತೀಕ್‌ ಬಾಯಲ್‌, ಅಪರ ಜಿಲ್ಲಾಧಿಕಾರಿ ಮಮತಾದೇವಿ ಇದ್ದರು. ಮತ್ತು ಅದಾನಿ ಕಂಪೆನಿಯ ಅಧಿಕಾರಿಗಳು ಇದ್ದರು.

administrator

Related Articles

Leave a Reply

Your email address will not be published. Required fields are marked *

error: Content is protected !!