ಉಡುಪಿ: ಪತ್ರಕರ್ತ, ಉಡುಪಿಮಿತ್ರ ಪತ್ರಿಕೆಯ ಸಂಪಾದಕ ಚಿತ್ತೂರು ಪ್ರಭಾಕರ ಆಚಾರ್ಯರಿಗೆ 2024ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಯುಕ್ತ ನಡೆಯುವ ಜಿಲ್ಲಾಮಟ್ಟದ ಸನ್ಮಾನಕ್ಕೆ ಆಯ್ಜೆಯಾಗಿದ್ದಾರೆ.

ಪತ್ರಿಕೋದ್ಯಮ ಕ್ಷೇತ್ರದಲ್ಲಿ ಮೂರು ದಶಕಗಳ ಪ್ರಾಮಾಣಿಕ ಸೇವೆ ಸಲ್ಲಿಸಿ, 25 ವರ್ಷಗಳಿಂದ ಉಡುಪಿ ಮಿತ್ರ ಪತ್ರಿಕೆ ಸಂಪಾದಕರಾಗಿರುವ, ಬ್ರಹ್ಮಾವರ ವಲಯ ಪತ್ರಕರ್ತರ ಸಂಘ, ತಾಲೂಕು ಪತ್ರಕರ್ತರ ಸಂಘದ ಸ್ಥಾಪಕ ಅಧ್ಯಕ್ಷರಾಗಿ ಸಂಘಟನೆಯನ್ನು ಗಟ್ಟಿಯಾಗಿ ಕಟ್ಟಿಬೆಳೆಸಿದ್ದಾರೆ.
ಪ್ರಭಾಕರ ಆಚಾರ್ಯ ಅವರು ಬ್ರಹ್ಮಾವರ ಪತ್ರಕರ್ತರ ಸಂಘದ ಮೂಲಕ ಪ್ರತಿಷ್ಠಿತ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿ ಸ್ಥಾಪಿಸಿ ತಾಲೂಕು ಸಂಘದ ಸದಸ್ಯರ ನೆರವಿನೊಂದಿಗೆ ರಾಜ್ಯಕ್ಕೆ ಮಾದರಿಯಾಗುವ ನಿರಂತರ ಕಾರ್ಯಕ್ರಮಗಳನ್ನು ಆಯೋಜಿಸಿದ್ದರು ಹಾಗೂ ಉಡುಪಿಮಿತ್ರ ಪತ್ರಿಕೆಯ ಮೂಲಕ ನಿರಂತರವಾಗಿ ಜನಪರ ವರದಿಗಳನ್ನು ಪ್ರಕಟಿಸುತ್ತಿದ್ದಾರೆ ಹಾಗೂ ಉಪ್ರಳ್ಳಿ ಕಾಳಿಕಾಂಬ ದೇವಸ್ಥಾನದ ಸೇವಾದಳ ಅಧ್ಯಕ್ಷರಾಗಿ, ಪ್ರಸ್ತುತ ಆಡಳಿತ ಮಂಡಳಿ ಎರಡನೇ ಮೊಕ್ತೇಸರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ವಿವಿಧ ರೀತಿಯ ಸೇವೆ ಮತ್ತು ಇತರ ಸಮಾಜಮುಖಿ ಚಟುವಟಿಕೆಗಳನ್ನು ಗುರುತಿಸಿ ಉಡುಪಿ ಜಿಲ್ಲಾಮಟ್ಟದ ಸನ್ಮಾನಕ್ಕೆ ಜಿಲ್ಲಾಡಳಿತ ಆಯ್ಕೆ ಮಾಡಿದೆ.
ನಾಳೆ ನಡೆಯುವ ಜಿಲ್ಲಾಮಟ್ಟದ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸನ್ಮಾನಿಸಲಿದ್ದಾರೆ.