ಉಡುಪಿ: ಸಂತೆಕಟ್ಟೆಯಲ್ಲಿ ನಡೆಯುತ್ತಿರುವ ಓವರ್ಪಾಸ್ ಕಾಮಗಾರಿ ವಿಳಂಬದಿಂದ ಸಾರ್ವಜನಿಕರಿಗೆ ಸಾಕಷ್ಟು ತೊಂದರೆಯಾಗುತ್ತಿದ್ದು, ಕಾಮಗಾರಿಗೆ ವೇಗ ನೀಡಬೇಕೆಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಬುಧವಾರ ರಜತಾದ್ರಿಯಲ್ಲಿ ನಡೆದ ರಾಷ್ಟ್ರೀಯ ಹೆದ್ದಾರಿ ಸಮಸ್ಯೆಗಳ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಸಂತೆಕಟ್ಟೆಯಲ್ಲಿ ಓವರ್ಪಾಸ್ ಕಾಮಗಾರಿಯಿಂದ ಸಂಪೂರ್ಣ ದೂಳಿನಿಂದ ತುಂಬಿದೆ. ಸಾಕಷ್ಟು ಸಮಸ್ಯೆಗಳು ಸಾರ್ವಜನಿಕರು ಎದುರಿಸುತ್ತಿದ್ದಾರೆ. ದೂಳಿಗೆ ಪರಿಹಾರ ಏನು ನೀಡುತ್ತಿರಿ ಎಂದು ಕೋಟ ಶ್ರೀನಿವಾಸ ಪೂಜಾರಿ ಕೇಳಿದರು.
ಇದಕ್ಕೆ ಉತ್ತರಿಸಿದ ಅಧಿಕಾರಿಗಳು ನಗರಸಭೆ ನೀರಿನ ಟ್ಯಾಂಕರ್ ನೀಡಿದ್ದಲ್ಲಿ ನೀರು ಬಿಡುವ ಮೂಲಕ ದೂಳು ಕಡಿಮೆ ಮಾಡಬಹುದು ಎಂದರು. ಇದಕ್ಕೆ ನಗರಸಭೆಯ ಪೌರಾಯುಕ್ತ ರಾಯಪ್ಪ ಒಪ್ಪಿಗೆ ಸೂಚಿಸಿದರು. ಈ ಸಂದರ್ಭ ಸಂತೆಕಟ್ಟೆಯ ಸಂತೆ ಮಾರುಕಟ್ಟೆಯ ರಸ್ತೆ ಸಂಪೂರ್ಣ ಹಾಳಾಗಿದೆ ಅಲ್ಲಿ ಸಂಚಾರಕ್ಕೆ ತೀವ್ರ ತೊಡಕಾಗಿದೆ ಆ ರಸ್ತೆ ದುರಸ್ತಿಗೊಳಿಸಿದರೆ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂಬ ವಿಷಯ ಚರ್ಚೆಗೆ ಬಂತು. ಈ ಸಂದರ್ಭ ಮಾತನಾಡಿದ ರಾಯಪ್ಪ ಅಲ್ಲಿ ಸಂಚಾರವನ್ನು ಕೆಲ ದಿನಗಳ ಕಾಲ ನಿಲ್ಲಿಸಿದ್ದೇ ಆದ್ದಲ್ಲಿ ನಾವು ರಸ್ತೆಯನ್ನು ದುರಸ್ತಿ ಮಾಡುತ್ತೇವೆ ಎಂದರು. ಆಗ ಮಾತನಾಡಿದ ಹೆದ್ದಾರಿಯ ಪ್ರಾಜೆಕ್ಟ ಮ್ಯಾನೇಜರ್ ನ.30ರ ಆಸುಪಾಸಿನಲ್ಲಿ ಸರ್ವಿಸ್ ರಸ್ತೆಗಳನ್ನು ಮುಕ್ತಗೊಳಿಸುತ್ತೇವೆ. ಆಗ ಆ ರಸ್ತೆಯ ಅವಶ್ಯಕತೆ ಬರುವುದಿಲ್ಲ. ಇನ್ನೊಂದು ವಾರದಲ್ಲಿ ಡಾಮರೀಕರಣ ಕಾಮಗಾರಿಗಳು ಪೂರ್ಣಗೊಳ್ಳುತ್ತದೆ. ಆಗ ಅತೀ ಭಾರದ ವಾಹನಗಳನ್ನು ಹೊರತುಪಡಿಸಿ ಇತರ ವಾಹನಗಳ ಸಂಚಾರಕ್ಕೆ ಯಾವುದೇ ತೊಡಕಿಲ್ಲ ಎಂದರು.