ಮಂಗಳೂರು: ಕಾಸರಗೋಡಿನ ನೀಲೇಶ್ವರಂನ ಅಂಜೂಟ್ಟಂಬಳಂ ವೀರರ್ ಕಾವು ತೆಯ್ಯಂ ಕಟ್ಟೆ ಮಹೋತ್ಸವದ ವೇಳೆ ಪಟಾಕಿ ಸಂಗ್ರಹಕ್ಕೆ ಬೆಂಕಿ ಬಿದ್ದ ಪರಿಣಾಮ 150 ಮಂದಿಗೆ ಗಾಯವಾಗಿದ್ದು, 8 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಾಳುಗಳಲ್ಲಿ 21 ಮಂದಿ ಮಂಗಳೂರಿನ ಎ.ಜೆ.ಆಸ್ಪತ್ರೆ ಹಾಗೂ ಮೂವರು ಮಂಗಳೂರಿನ ದೇರಳಕಟ್ಟೆಯ ಯೆನೆಪೋಯ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.

ಎ.ಜೆ.ಆಸ್ಪತ್ರೆಯಲ್ಲಿ ದಾಖಲಾದ 21ಮಂದಿಯಲ್ಲಿ ನಾಲ್ವರು ಮಕ್ಕಳಿದ್ದಾರೆ. ಯೆನೆಪೋಯದಲ್ಲಿ ಇಬ್ಬರು ಮಕ್ಕಳು ಹಾಗೂ ಓರ್ವ ಮಹಿಳೆಯನ್ನು ದಾಖಲಿಸಲಾಗಿದೆ. ಇವರ ಪರಿಸ್ಥಿತಿ ಹೇಗಿದೆ ಎಂಬುದು ಇನ್ನಷ್ಟೇ ತಿಳಿಯಬೇಕಿದೆ.

ಇಲ್ಲಿ ಎರಡು ದಿನಗಳ ಉತ್ಸವ ನಡೆಯುತ್ತದೆ. ತೆಯ್ಯಂ ಹಿನ್ನೆಲೆಯಲ್ಲಿ ದೈವಸ್ಥಾನದ ಅಂಗಣದಲ್ಲಿಯೇ ಪರ್ಮಿಷನ್ ಇಲ್ಲದಿದ್ದರೂ ಪಟಾಕಿ ಬಿಡಲಾಗಿದೆ. ಈ ವೇಳೆ ಪಟಾಕಿಯ ಕಿಡಿಯೊಂದು ಹಾರಿ ಪಟಾಕಿ ಸಂಗ್ರಹಗಾರಕ್ಕೆ ಬಿದ್ದು ಪರಿಣಾಮ ಭಾರೀ ಪ್ರಮಾಣದ ಸ್ಪೋಟ ಸಂಭವಿಸಿ ಈ ದುರಂತ ಸಂಭವಿಸಿದೆ. ಗಾಯಾಳುಗಳನ್ನು ಕಾಂಞಗಾಡ್ ಹಾಗೂ ನೀಲೇಶ್ವರಂ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಂಭೀರವಾಗಿ ಗಾಯಗೊಂಡವರನ್ನು ಮಂಗಳೂರು ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
