ಮಂಗಳೂರು: ರೈಲು ಬೋಗಿಯೊಳಗೆ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರಗೈದಿರು ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಅಪರಾಧಿಗೆ 20ವರ್ಷಗಳ ಕಠಿಣ ಶಿಕ್ಷೆ ಹಾಗೂ 50ಸಾವಿರ ರೂ. ದಂಡ ವಿಧಿಸಿ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌ಟಿಎಸ್‌ಸಿ-2 ಪೊಕ್ಸೊ ವಿಶೇಷ ನ್ಯಾಯಾಲಯವು ತೀರ್ಪು ನೀಡಿದೆ.
ಬಂಟ್ವಾಳ ಬಿ ಕಸಬಾ ಗ್ರಾಮದ ನೆಹರೂ ನಗರ ನಿವಾಸಿ ಅಬುತಾಹಿರ್ ಅಲಿಯಾಸ್ ಶಾಝಿಲ್ (20) ಶಿಕ್ಷೆಗೊಳಗಾದ ಅಪರಾಧಿ.
ಅಬುತಾಹಿರ್ ಅಪ್ರಾಪ್ತೆಯನ್ನು ಫೋನ್ ಮೂಲಕ ಪರಿಚಯ ಮಾಡಿಕೊಂಡಿದ್ದ. 2023ರ ಜೂ.22ರಂದು ಶಾಲೆಗೆ ಬಂದಿದ್ದ ಬಾಲಕಿಯನ್ನು ಮಡಂತ್ಯಾರಿನಲ್ಲಿ ಭೇಟಿಯಾಗಿ ಅಲ್ಲಿಂದ ಮಂಗಳೂರಿಗೆ ಕರೆದುಕೊಂಡು ಬಂದಿದ್ದ. ಅಲ್ಲಿಂದ ಗೋವಾಕ್ಕೆ ತೆರಳಲು ಸೆಂಟ್ರಲ್ ರೈಲು ನಿಲ್ದಾಣಕ್ಕೆ ಕರೆದೊಯ್ದಿದ್ದಾನೆ. ರಾತ್ರಿ 11ರಿಂದ 12 ಗಂಟೆಯ ನಡುವೆ ಪ್ಲಾಟ್‌ಫಾರಂ 3ರಲ್ಲಿ ತಂಗಿದ್ದ ಮಂಗಳೂರು-ಮಡಗಾಂವ್ ರೈಲಿನ ಖಾಲಿ ಬೋಗಿಯೊಳಗೆ ಕರೆದೊಯ್ದು ಒತ್ತಾಯಪೂರ್ವಕವಾಗಿ ಅತ್ಯಾಚಾರ ನಡೆಸಿದ್ದನು.
ಈ ನಡುವೆ ಬಾಲಕಿಯ ತಾಯಿ ಪುತ್ರಿ ನಾಪತ್ತೆಯಾಗಿದ್ದಾಳೆಂದು ದೂರು ನೀಡಿದ್ದರು. ರಾತ್ರಿ 12 ಗಂಟೆಗೆ ಬಾಲಕಿಯು ತಾಯಿಗೆ ಕರೆ ಮಾಡಿದ್ದಾಳೆ. ಕಾರ್ಯಾಚರಣೆ ನಡೆಸಿದ ಪೊಲೀಸರು ಬಾಲಕಿಯನ್ನು ರಕ್ಷಿಸಿ, ಆರೋಪಿಯನ್ನು ವಶಕ್ಕೆ ಪಡೆದಿದ್ದರು.
ಈ ಬಗ್ಗೆ ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪುಂಜಾಲಕಟ್ಟೆ ಪೊಲೀಸ್ ವೃತ್ತ ನಿರೀಕ್ಷಕ ಶಿವಕುಮಾರ್ ಬಿ. ಮತ್ತು ನಾಗೇಶ್ ಕೆ. ತನಿಖೆ ಪೂರ್ಣಗೊಳಿಸಿ ಆರೋಪಿ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಲಯವು ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ ಅಬುತಾಹಿರ್‌ಗೆ 20 ವರ್ಷಗಳ ಕಠಿಣ ಶಿಕ್ಷೆ ಮತ್ತು 50 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಸರ್ಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕ ಕೆ. ಬದರಿನಾಥ ನಾಯರಿ ವಾದ ಮಂಡಿಸಿದ್ದರು.