ಮಂಗಳೂರು: ಸುರತ್ಕಲ್ ಪೊಲೀಸ್ ಠಾಣೆ ವ್ಯಾಪ್ತಿಯ ರೆಡ್ ರಾಕ್ ಸಮುದ್ರತೀರದಲ್ಲಿ ಮೂವರು ಯುವಕರು ಹಾಗೂ ನಗರದ ಶ್ರೀನಿವಾಸ ಕಾಲೇಜು ಬಳಿಯ ಸಾರ್ವಜನಿಕ ಸ್ಥಳದಲ್ಲಿ ಓರ್ವ ಯುವಕ ಗಾಂಜಾ ಸೇವನೆ ಮಾಡಿರುವ ಆರೋಪದಲ್ಲಿ ಪ್ರಕರಣ ದಾಖಲಾಗಿದೆ.
ಅ.23 ರಂದು ರಾತ್ರಿ 9ಗಂಟೆಗೆ ಸುರತ್ಕಲ್ ಸಮೀಪದ ರೆಡ್ ರಾಕ್ ಸಮುದ್ರತೀರದಲ್ಲಿ ಮೂವರು ಯುವಕರು ಸಿಗರೇಟು ಸೇದುತ್ತಿರುವಾಗ ಪೊಲೀಸರು ಅವರನ್ನು ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ಬೆಂಗಳೂರಿನ ಡಿ. ಸರನ್ (23), ಮೈಸೂರಿನ ಸಂಜಯ ಆರ್ (24) ಮತ್ತು ಕೇರಳದ ಅನುಷ್ಕರ್ ಕೆ.ಎಸ್ (23) ಎಂಬವರು ಗಾಂಜಾ ಸೇವನೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ.
ವಿಚಾರಣೆಯಲ್ಲಿ ಸಂಜಯ ಆರ್. ಮತ್ತು ಅನುಷ್ಕರ್ ತಮ್ಮ ಸಿಗರೇಟುಗಳಲ್ಲಿ ಗಾಂಜಾವನ್ನು ಸೇರಿಸಿಕೊಂಡು ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಈ ಮಾಹಿತಿ ಮೇರೆಗೆ ಯುವಕರನ್ನು ವೈದ್ಯಕೀಯ ಪರೀಕ್ಷೆಗಾಗಿ ಮಂಗಳೂರು ಏ.ಜೆ ಆಸ್ಪತ್ರೆ ಕುಂಟಿಕಾನ ಕಳುಹಿಸಲಾಯಿತು.
ವೈದ್ಯಕೀಯ ವರದಿಯ ಪ್ರಕಾರ Tetrahydracannabinoid (marijuana) ಪಾಸಿಟಿವ್ ಎಂದು ದೃಢಪಟ್ಟಿದ್ದು, ಈ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಈ ಮೂವರ ವಿರುದ್ಧ ಮಾದಕ ವಸ್ತು ಸೇವನೆ ಪ್ರಕರಣ ದಾಖಲಿಸಲಾಗಿದೆ.
ಮತ್ತೊಂದು ಪ್ರಕರಣದಲ್ಲಿ ಮಂಗಳೂರು ನಗರದ ಶ್ರೀನಿವಾಸ್ ಕಾಲೇಜ್ ಬಳಿಯ ಸಾರ್ವಜನಿಕ ಸ್ಥಳದಲ್ಲಿ ಓರ್ವ ಯುವಕ ಗಾಂಜಾ ಸೇವನೆ ಮಾಡಿ ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುತ್ತಿದ್ದಾನೆ ಎಂಬ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ತೆರಳಿ ಅಲ್ಲಿರುವ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದಾರೆ.
ತ್ರಿಶ್ಶೂರ್ ಜಿಲ್ಲೆಯ ಅಕಲಾಡ್ ಮೂಲದ, ಸದ್ಯ ಮಂಗಳೂರು ವೆಲೆನ್ಸಿಯಾದ ಸ್ಟಾನ್‌ಪಾರ್ಕ್ ಅಪಾರ್ಟ್‌ಮೆಂಟ್ ನಿವಾಸಿ ನಿಹಾಲ್ ಸಿ ರಜಾಕ್(20) ಎಂಬಾತನನ್ನು ವಿಚಾರಣೆ ನಡೆಸಿದಾಗ, ಆತ ಗಾಂಜಾ ಸೇವನೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕದ್ರವ್ಯ ಸೇವನೆ ಮಾಡಿರುವುದು ವೈದ್ಯಕೀಯವಾಗಿ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಆರೋಪಿಯ ವಿರುದ್ಧ ಎನ್.ಡಿ.ಪಿ.ಎಸ್ ಆಕ್ಟ್‌ನ ಕಲಂ-27 (ಬಿ) ರಂತೆ ಪ್ರಕರಣ ದಾಖಲಿಸಲಾಗಿದೆ.