• November 23, 2025
  • Last Update November 14, 2025 3:04 pm
  • Australia

ಅತ್ಯಾಚಾರಿಗೆ 10ವರ್ಷ ಕಠಿಣ ಶಿಕ್ಷೆ, ದಂಡ

ಅತ್ಯಾಚಾರಿಗೆ 10ವರ್ಷ ಕಠಿಣ ಶಿಕ್ಷೆ, ದಂಡ

ಮಂಗಳೂರು: ಯುವತಿಯನ್ನು ಅತ್ಯಾಚಾರ ಮಾಡಿ ಗರ್ಭಿಣಿಯನ್ನಾಗಿಸಿದ ಪ್ರಕರಣದ ಆರೋಪ ಮಂಗಳೂರಿನ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸಾಬೀತಾದ ಹಿನ್ನೆಲೆಯಲ್ಲಿ ನ್ಯಾಯಾಧೀಶ ಕಾಂತರಾಜು ಎಸ್.ವಿ. ಅವರು ಆರೋಪಿಗೆ 10 ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿ ಶುಕ್ರವಾರ ಆದೇಶಿಸಿದ್ದಾರೆ.

ಪುತ್ತೂರು ತಾಲೂಕು ಕುಟ್ರುಪ್ಪಾಡಿ ಗ್ರಾಮದ ಜಗನ್ನಾಥ್ ಕೆ. ಮೊಗೇರ (38) ಶಿಕ್ಷೆಗೊಳಗಾದ ಆರೋಪಿ.

ಜಗನ್ನಾಥ್ ಕೆ. ಮೊಗೇರ ತನ್ನ ದೂರದ ಸಂಬಂಧಿ ಯುವತಿಯನ್ನು ಅತ್ಯಾಚಾರವೆಸಗಿ ಗರ್ಭಿಣಿಯನ್ನಾಗಿಸಿದ್ದ ಬಗ್ಗೆ 2016ರ ಫೆ.25ರಂದು ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮನೆಯಲ್ಲಿ ಯುವತಿ ಮಾತ್ರವಿದ್ದಾಗ ಆರೋಪಿ ಜಗನ್ನಾಥ್ ನೀರು ಕೇಳುವ ನೆಪದಲ್ಲಿ ಮನೆಯೊಳಗೆ ಬಂದು ಆಕೆಯ ಮೇಲೆ ಅತ್ಯಾಚಾರವೆಸಗಿದ್ದ. ಬಳಿಕ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಸಿದ್ದ. ಆ ಬಳಿಕವೂ ಬೆದರಿಕೆ ಹಾಕಿ ಹಲವು ಬಾರಿ ಅತ್ಯಾಚಾರವೆಸಗಿದ್ದ. ಯುವತಿ ಗರ್ಭಿಣಿಯಾದ ವಿಚಾರ ತಿಳಿದ ಮನೆಯವರು ಪೊಲೀಸರಿಗೆ ದೂರು ನೀಡಿದ್ದರು.

ಅದರಂತೆ ಪ್ರಕರಣ ದಾಖಲಿಸಿದ್ದ ಅಂದಿನ ವೃತ್ತ ನಿರೀಕ್ಷಕ ಅನಿಲ್ ಎಸ್.ಕುಲಕರ್ಣಿ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಲಯದಲ್ಲಿ ವಿಚಾರಣೆಯ ವೇಳೆ 9 ಮಂದಿ ಸಾಕ್ಷಿದಾರರನ್ನು ವಿಚಾರಿಸಿ 20 ದಾಖಲೆಗಳನ್ನು ಗುರುತಿಸಲಾಗಿತ್ತು. ಆರೋಪಿಯ ಕೃತ್ಯ ಸಾಬೀತಾಗಿರುವುದನ್ನು ತೀರ್ಮಾನಿಸಿದ ನ್ಯಾಯಾಧೀಶರು ಐಪಿಸಿ ಸೆಕ್ಷನ್ 376ರಡಿ 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ, ಕಲಂ 506ರಡಿ 5 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು 5,000 ರೂ. ದಂಡ, ಒಂದು ವೇಳೆ ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 2 ತಿಂಗಳ ಕಾರಾಗೃಹ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ ಸಂತ್ರಸ್ತೆಗೆ ಪರಿಹಾರ ನೀಡುವಂತೆ ಕಾನೂನು ಸೇವಾ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡಿದ್ದಾರೆ.

administrator

Related Articles

Leave a Reply

Your email address will not be published. Required fields are marked *

error: Content is protected !!