ಮಂಗಳೂರು: ದ.ಕ.ಜಿಲ್ಲೆಯಿಂದ ಲೋಕಾಯುಕ್ತಕ್ಕೆ ಸಲ್ಲಿಕೆಯಾಗಿರುವ ಒಟ್ಟು 198 ದೂರುಗಳಲ್ಲಿ ಎರಡು ದಿನಗಳಲ್ಲಿ 81ದೂರುಗಳನ್ನು ಇತ್ಯರ್ಥ ಮಾಡಲಾಗಿದೆ ಎಂದು ಕರ್ನಾಟಕ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ಇತ್ತೀಚೆಗೆ ತುಮಕೂರಿನಲ್ಲಿ 150 ಮತ್ತು ಕಲುಬುರ್ಗಿಯಲ್ಲಿ 90 ದೂರುಗಳನ್ನು ಇತ್ಯರ್ಥ ಮಾಡಲಾಗಿತ್ತು ಎಂದು ತಿಳಿಸಿದರು.
ಶಿರಾಡಿ ಘಾಟ್‌ನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಅಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ನೀಡುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದರು. ಈ ಬಗ್ಗೆ ಜಿಲ್ಲಾಧಿಕಾರಿಗೆ ಸೂಚಿಸಲಾಯಿತು. ಅವರು ಅರ್ಧ ತಾಸಿನಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯವರಲ್ಲಿ ತಿಳಿಸಿ ಆ್ಯಂಬುಲೆನ್ಸ್ ಮಂಜೂರು ಮಾಡಿಸಿದ್ದಾರೆ ಎಂದು ಉಪಲೋಕಾಯುಕ್ತರು ತಿಳಿಸಿದರು.
ಪಚ್ಚನಾಡಿಯಲ್ಲಿ ಸುಮಾರು 9ಲಕ್ಷ ಟನ್ ತ್ಯಾಜ್ಯ ಸಂಗ್ರಹವಾಗಿದ್ದು, ಅದರಲ್ಲಿ ಸುಮಾರು 1ಲಕ್ಷ ಟನ್ ಮಾತ್ರ ವಿಲೇವಾರಿಯಾಗಿದೆ. ಉಳಿದ ಕಸ ವಿಲೇವಾರಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ತ್ಯಾಜ್ಯದಿಂದ ಸುತ್ತಲಿನ ಪರಿಸರದ ಮೇಲೆ ಆಗಿರುವ ದುಷ್ಪರಿಣಾಮಗಳ ಬಗ್ಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನ್ಯಾಯಮೂರ್ತಿ ಬಿ.ವೀರಪ್ಪ ತಿಳಿಸಿದರು.
ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿರುವ ಕೋಟೆಕಾರು ನಪಂನ ಮುಖ್ಯಾಧಿಕಾರಿ ವಿರುದ್ಧ ಕ್ರಮ ಕೈಗೊಂಡು ವರದಿ ನೀಡಲು ಇಲಾಖೆಯ ಮೇಲಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಅವರು ತಿಳಿಸಿದರು.
ಸ್ಕೀಮ್ ಅವ್ಯವಹಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಉಪಲೋಕಾಯುಕ್ತ ಬಿ.ವೀರಪ್ಪನವರು, ಅಧಿಕ ಬಡ್ಡಿ ನೀಡುತ್ತೇವೆ, ಫ್ಲ್ಯಾಟ್, ಕಾರು ನೀಡುತ್ತೇವೆ ಎಂಬ ಆಮಿಷಕ್ಕೆ ಬಲಿಯಾಗಿ ಕೆಲವರು ಹಣ ಹೂಡಿಕೆ ಮಾಡುತ್ತಾರೆ. ಬೆಂಗಳೂರಿನಲ್ಲಿಯೂ ಇಂತಹ ಪ್ರಕರಣಗಳು ನಡೆದಿವೆ. ಚೀಟಿ ಮಾಡಿ ಮೋಸ ಮಾಡುವವರು ಇದ್ದಾರೆ. ಶೇ.18ರಿಂದ ಶೇ.20 ಲಾಭಾಂಶ ಸಿಗುತ್ತದೆ ಎಂಬ ಆಸೆಯಿಂದ ನಂಬಿ ಹಣ ನೀಡುತ್ತಾರೆ. ಇಂತಹ ವಂಚನೆಗಳ ಬಗ್ಗೆ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಹೇಳಿದರು.