ಬಂಟ್ವಾಳ: ಬಿ.ಸಿ.ರೋಡಿನ ತಲಪಾಡಿಯಲ್ಲಿ 20 ದಿನಗಳ ಹಿಂದೆ ನಡೆದ ಬೈಕ್ ಅಪಘಾತದಲ್ಲಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ಮರಳಿದ್ದ ವ್ಯಕ್ತಿಯೊಬ್ಬರು ಮತ್ತೆ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಕಳ್ಳಿಗೆ ಗ್ರಾಮದ ಕಂಜತ್ತೂರು ನಿವಾಸಿ ಭೋಜ ಮೂಲ್ಯ (62) ಮೃತಪಟ್ಟವರು.
ಸುಮಾರು 20 ದಿನಗಳ ಹಿಂದೆ ಅ.11ರಂದು ಸಂಜೆ 7ಗಂಟೆ ಸುಮಾರಿಗೆ ತಲಪಾಡಿಯಲ್ಲಿ ಹೆದ್ದಾರಿ ದಾಟುತ್ತಿದ್ದರು. ಈ ವೇಳೆ ಇವರಿಗೆ ಬೈಕ್ ಢಿಕ್ಕಿಯಾಗಿ ಕಾಲಿಗೆ ಗಾಯವಾಗಿತ್ತು. ತಕ್ಷಣ ಅವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರಗಳ ಕಾಲ ಚಿಕಿತ್ಸೆ ಪಡೆದು ಅವರು ಮನೆಗೆ ಮರಳಿದ್ದರು.
ಆದರೆ ಅ.28ರಂದು ಮತ್ತೆ ಅನಾರೋಗ್ಯಕ್ಕೆ ತುತ್ತಾಗಿ ತುಂಬೆ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಬಂಟ್ವಾಳ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಂಗಳವಾರ ಪಿಎಸ್‌ಐ ಸುತೇಶ್ ಕೆ.ಪಿ. ಅವರ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಭೋಜ ಮೂಲ್ಯ ಅವರು ಅಂಬಾಸಿಡರ್ ಕಾರು ಚಾಲಕರಾಗಿದ್ದು, ಬಿ.ಸಿ.ರೋಡ್ ಪರಿಸರದಲ್ಲಿ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಜತೆಗೆ ಕಾರು ಚಾಲಕ-ಮಾಲಕರ ಸಂಘಟನೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು.