ಕುಂಭಾಶಿ: ಇಲ್ಲಿನ ಚಂಡಿಕಾದುರ್ಗಾಪರಮೇಶ್ವರೀ ದೇವಸ್ಥಾನದ ಮುಂಭಾಗ ನಡೆದ ಭೀಕರ ಅಪಘಾತದಲ್ಲಿ ಹಲವರು ಗಾಯಗೊಂಡ ಬಗ್ಗೆ ವರದಿಯಾಗಿದೆ.
ಕಾರಿನಲ್ಲಿ ಒಟ್ಟು 7 ಮಂದಿ ಪ್ರಯಾಣಿಸುತ್ತಿದ್ದು, ಕೇರಳದ ಪಯ್ಯನ್ನೂರು ಮೂಲದವರು ಎಂದು ತಿಳಿದುಬಂದಿದೆ. ಗೋಕರ್ಣ ಮತ್ತು ಕೊಲ್ಲೂರು ದರ್ಶನ ಮುಗಿಸಿ ವಾಪಾಸು ಕೇರಳಕ್ಕೆ ಹೋಗುವಾಗ ಘಟನೆ ಸಂಭವಿಸಿದೆ
ಘಟನೆ ವಿವರ: ಕುಂಭಾಶಿ ಚಂಡಿಕಾ ದುರ್ಗಾಪರಮೇಶ್ಚರೀ ದೇವಸ್ಥಾನದ ಮುಂಭಾಗ ಘಟನೆ ನಡೆದಿದ್ದು, ಕೊಲ್ಲೂರಿನಿಂದ ಕೇರಳ ಕಡೆ ತೆರಳುವ ಇನ್ನೊವಾ ಕಾರು ಚಂಡಿಕಾ ದುರ್ಗಾಪರಮೇಶ್ವರೀ ದೇವಸ್ಥಾನದ ಬಳಿ ತೆರಳುವಾಗ ದೇವಸ್ಥಾನ ನೋಡಿ ಸ್ವಲ್ಪ ಮುಂದೆ ನಿಲ್ಲಿಸುತ್ತಾನೆ. ನಿಧಾನಕ್ಕೆ ಹಿಮ್ಮುಖ ಚಲಿಸಿ ಬರುವ ಸಂದರ್ಭ ಹೊನ್ನಾವರದಿಂದ ಉಡುಪಿ ಕಡೆ ತೆರಳುತ್ತಿದ್ದ ಮೀನುಸಾಗಣೆಯ ಇನ್ಸುಲೆಟರ್ ವಾಹನ ಬಂದು ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ಇನ್ಸುಲೇಟರ್ ವಾಹನ ಪಲ್ಟಿಯಾಗಿದ್ದು ಕಾರು ಕೂಡ ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರಿನಲ್ಲಿ ಮಧುಸೂದನ್(64), ಭಾರ್ಗವನ್(65), ನಾರಾಯಣ್, ವಾತ್ಸಲ, ಅನಿತಾ, ಚೈತ್ರಾ ಹಾಗೂ ಚಾಲಕ ಪೈಝಲ್(35) ಪ್ರಯಾಣಿಸುತ್ತಿದ್ದರು.
ಇವರಲ್ಲಿ ನಾರಾಯಣ್, ವಾತ್ಸಲ, ಅನಿತಾ, ಚೈತ್ರಾ ಗಂಭೀರ ಗಾಯಗೊಂಡಿದ್ದು ಇವರನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ಸುಲೆಟರ್ ವಾಹನದ ಚಾಲಕ ಹೊನ್ನಾವರ ಮೂಲದ ಮಹೇಶ್ ಸೇರಿದಂತೆ ಉಳಿದವರನ್ನು ಕೋಟೇಶ್ವರ್ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಕುಂದಾಪುರ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.