ಮಂಗಳೂರು: ಕಾಡಾನೆಗಳ ಹಾವಳಿ ಬಗ್ಗೆ ಸದನದಲ್ಲಿ ಚರ್ಚೆ ನಡೆಸುತ್ತಿದ್ದ ವೇಳೆ ಶಾಸಕ ಹರೀಶ್ ಪೂಂಜಾ ಕಾಡಾನೆಗಳನ್ನು ಗುಂಡಿಕ್ಕಿ ಹತ್ಯೆ ಮಾಡಲು ಕೋವಿ ಪರವಾನಿಗೆ ಕೊಡಿ ಎಂದು ಅರಣ್ಯ ಸಚಿವರಿಗೆ ಒತ್ತಡ ಹೇರಿರುವ ಬಗ್ಗೆ ಪ್ರಾಣಿಪ್ರಿಯರಿಂದ ಆಕ್ರೋಶ ವ್ಯಕ್ತವಾಗಿದೆ.
ರೈತರು ಬೆಳೆದ ಕೃಷಿ ಭೂಮಿಗಳನ್ನು ಕಾಡಾನೆಗಳು ದಾಳಿ ನಡೆಸಿ ಹಾಳುಗೆಡವುತ್ತಿದೆ. ಆದ್ದರಿಂದ ರೈತರ ಕೋವಿಗೆ ಅನುಮತಿ ಕೊಡಿ ನಾವು ಗುಂಡಿಟ್ಟು ಕೊಲ್ಲುತ್ತೇವೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆಯವರಿಗೆ ಹೇಳಿದ್ದಾರೆ. ಓರ್ವ ಶಾಸಕನಾಗಿ ಪ್ರಾಣಿಗಳನ್ನು ಹತ್ಯೆ ಮಾಡುತ್ತೇನೆ ಕೋವಿ ಪರವಾನಿಗೆ ಕೊಡಿ ಎಂದು ಸದನದಲ್ಲಿಯೇ ನಾಲಗೆ ಹರಿಬಿಟ್ಟಿರುವುದು ಪ್ರಾಣಿಪ್ರಿಯರ ಕೆಂಗಣ್ಣಿಗೆ ಗುರಿಯಾಗಿದೆ. ಓರ್ವ ಜವಾಬ್ದಾರಿಯುತ ಸ್ಥಾನದಲ್ಲಿರುವವರ ಮಾತನಾಡುವ ಮಾತೇ ಇದು ಎಂಬಂಥಹ ಮಾತುಗಳು ಕೇಳಿ ಬರುತ್ತಿದೆ.
ಮನುಷ್ಯರಂತೆ ಪ್ರಾಣಿಗಳಿಗೂ ಭೂಮಿಯಲ್ಲಿ ಬದುಕಲು ಹಕ್ಕಿದೆ. ಆನೆಗಳು ವಾಸಿಸುವ ಅರಣ್ಯಭೂಮಿಯನ್ನು ಮಾನವ ಒತ್ತುವರಿ ಮಾಡಿ ಕೃಷಿ ಭೂಮಿಯನ್ನಾಗಿಸಿದ್ದಾನೆ. ಕಾಡಾನೆಗಳು ತಾವು ಯಾವಾಗಲೂ ಸಂಚಾರ ನಡೆಸುವ ಮಾರ್ಗದಲ್ಲಿಯೇ ಬರುತ್ತಿರುತ್ತದೆ. ಆದ್ದರಿಂದ ಅದು ಮಾನವ ಅತಿಕ್ರಮಣ ಭೂಮಿಗೂ ಬರುತ್ತದೆ. ಆದ್ದರಿಂದ ಅದನ್ನು ಗುಂಡಿಟ್ಟು ಕೊಲ್ಲಲು ಅವಕಾಶ ಕೊಡಿ ಎಂದು ಜವಾಬ್ದಾರಿಯುತ ಶಾಸಕನೋರ್ವ ಎಂದು ಹೇಳುವುದು ಎಷ್ಟು ಸರಿ ಎಂಬ ಮಾತು ಕೇಳಿ ಬರುತ್ತಿದೆ.