ಸಾಸ್ತಾನ: ಜ್ಞಾನವೆನ್ನುವುದು ಗೂಗಲ್ನ ಸ್ವತ್ತಾಗಿದೆ. ಎಲ್ಲವನ್ನೂ ಈಗ ಗೂಗಲ್, ಚಾಟ್ ಜಿಪಿಟಿಯ ಮೊರೆ ಹೋಗುವುದು ಮುಂದಿನಪೀಳಿಗೆಗೆ ಮಾರಕ ಎಂದು ಮಲ್ಪೆ- ಕೊಚ್ಚಿನ್ ಶಿಪ್ ಯಾರ್ಡ್ನ ಸಿಇಓ ಹರಿಕುಮಾರ್ ಹೇಳಿದರು.
ಅವರು, ಹಂಗಾರಕಟ್ಟೆಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಸಮಾರಂಭವನ್ನುದ್ದೇಶಿಸಿ ಮಾತನಾಡಿ, ಮಕ್ಕಳು ಸಾಮಾಜಿಕ ಜಾಲತಾಣಗಳ ಹುಳುವಾಗದೇ ಪುಸ್ತಕದ ಹುಳುವಾಗಬೇಕು. ಶಾಲೆಯಲ್ಲಿರುವ ಪುಸ್ತಕದ ಭಂಡಾರದ ಸದುಪಯೋಗಪಡಿಸಿಕೊಳ್ಳಬೇಕು ಎಂದು ಕರೆನೀಡಿದರು.

ಶಾಲಾಭಿವೃದ್ಧಿ ಸಮಿತಿಯ ರಾಜಶೇಖರ್ ಹೆಬ್ಬಾರ್ ಮಾತನಾಡಿ, ಊರವರು ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಿ, ಶಾಲೆಯನ್ನು ಬೆಳೆಸುವ ಕೆಲಸ ಸಾರ್ವಜನಿಕರು ಮಾಡಬೇಕು. ಈಗ ಶಾಲೆಯ ಅಭಿವೃದ್ಧಿ ಕಾರ್ಯ ಕೂಡ ಚುರುಕಿನಲ್ಲಿ ನಡೆಯುತ್ತಿದ್ದು, ಹಳೆ ವಿದ್ಯಾರ್ಥಿ ಸಂಘದ ಸದಸ್ಯರು ಶಾಲಾಭಿವೃದ್ಧಿಗೆ ಹೆಚ್ಚಿನ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಉದ್ಯಮಿ ಭರತ್ಕುಮಾರ್ ಶೆಟ್ಟಿ ಮಾತನಾಡಿ, ಇಂದಿನ ಬೇಡಿಕೆಗೆ ಅನುಗುಣವಾಗಿ ಆಂಗ್ಲಮಾಧ್ಯಮ ಶಾಲೆ ಆರಂಭಿಸಲಾಗಿದೆ. ಆಂಗ್ಲ ಮಾಧ್ಯಮದ ಜೊತೆ ಕನ್ನಡ ಭಾಷೆಯನ್ನೂ ಗಟ್ಟಿಗೊಳಿಸುವ ಕೆಲಸವಾಗಬೇಕು ಎಂದು ಹೇಳಿದರು.
ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸ್ಕಂದ, ಕಾರ್ತಿಕ್ ಕುಮಾರ್, ಸೈದಾ ಬಾನು, ಪ್ರತೀಕ್ಷಾ ಸೃಜನಿ, ದಿಶಾಂತ್, ಕಾರ್ತಿಕ್ ಅವರಿಗೆ ಸನ್ಮಾನಿಸಲಾಯಿತು.
ನಿವೃತ್ತ ಶಿಕ್ಷಕರು ಮತ್ತು ವರ್ಗಾವಣೆಗೊಂಡ ಶಿಕ್ಷಕರಿಗೆ ಈ ಸಂದರ್ಭ ಗೌರವಿಸಲಾಯಿತು.
ಉತ್ತಮ ಎಸ್ಡಿಎಂಸಿ ಎಂಬ ಪ್ರಶಸ್ತಿ ಪಡೆದ ಎಸ್ಡಿಎಂಸಿ ಸದಸ್ಯರಿಗೆ ಗೌರವಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷೆ ರೇಖಾ ಉಡುಪ, ಗಣೇಶೋತ್ಸವ ಸಮಿತಿಯ ಆಧ್ಯಕ್ಷ ಆನಂದ ಗಾಣಿಗ, ಶೇಖರ್ ಪೂಜಾರಿ, ಸಿಆರ್ಪಿ ಮಾಲಿನಿ, ಮುಖ್ಯ ಶಿಕ್ಷಕಿ ಪ್ರಸಿಲ್ಲಾ ಮೊದಲಾದವರು ಇದ್ದರು