ಉಡುಪಿ: ರಾಷ್ಟ್ರೀಕೃತ ಬ್ಯಾಂಕ್ಗಳು ಬಡ ಜನರ ನೆಚ್ಚಿನ ಬ್ಯಾಂಕ್ ಆಗಿದ್ದವು, ಇಂದು ಆ ಸ್ಥಾನವನ್ನು ಸಹಕಾರಿ ಸಂಘಗಳು ವಹಿಸಿಕೊಂಡಿದೆ ಎಂದು ಉಡುಪಿ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಅವರು ಮಣಿಪಾಲದ ರಜತಾದ್ರಿಯ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಪಿಎಂ ವಿಶ್ವಕರ್ಮ ಯೋಜನೆಯ ಪ್ರಗತಿಪರಿಶೀಲನಾ ಸಭೆಯನ್ನುದ್ದೇಶಿಸಿ ಮಾತನಾಡಿ, ಬ್ಯಾಂಕ್ಗಳು ನಿಯಮಗಳ ಬೆನ್ನು ಹತ್ತಿ, ಜನರಿಗೆ ಸುಲಭದಲ್ಲಿ ಸಾಲ ಸಿಗುವುದೆ ಕಷ್ಟ ಎನ್ನುವ ಪರಿಸ್ಥಿತಿ ಉಂಟಾಗಿದೆ.

ಪಿಎಂ ವಿಶ್ವಕರ್ಮ ಯೋಜನೆಯ ಮೂಲಕ ರಾಷ್ಟ್ರೀಕೃತ ಬ್ಯಾಂಕ್ಗಳನ್ನು ಮತ್ತೇ ಬಡಜನರ ಸ್ನೇಹಿ ಬ್ಯಾಂಕನ್ನಾಗಿ ಮಾಡುವ ಉದ್ದೇಶ ಹೊಂದಿದೆ. ಇದಕ್ಕಾಗಿ ಕೇಂದ್ರ ಸರಕಾರ ಈ ಯೋಜನೆಗೆ 12000ಕೋಟಿ ರೂ. ಗ್ಯಾರೆಂಟಿ ನೀಡಿದೆ. ಇದರಿಂದ ತಳವರ್ಗದ ಜನರನ್ನು ಆರ್ಥಿಕವಾಗಿ ಸಶಕ್ತರನ್ನಾಗಿಸುವ ಗುರಿಯನ್ನು ಹೊಂದಿದೆ ಎಂದರು.
ಈ ಸಂದರ್ಭ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ ಸಂಸದರು, ಜಿಲ್ಲೆಯಲ್ಲಿ ಎಷ್ಟು ಜನ ವಿಶ್ವಕರ್ಮ ಯೋಜನೆಯಡಿ ಅರ್ಜಿ ಸಲ್ಲಿಸಿದ್ದಾರೆ, ಸಾಲನೀಡಲಾಗಿದೆ ಮತ್ತು ಎಷ್ಟು ಜನರಿಗೆ ಸಾಲ ನೀಡಲು ಬಾಕಿ ಇದೆ ಎನ್ನುವ ಮಾಹಿತಿಯನ್ನು ಕೇಳಿದರು. ಇದಕ್ಕೆ ಉತ್ತರಿಸಿದ ಲೀಡ್ ಬ್ಯಾಂಕ್ನ ಪ್ರಬಂಧಕ ಹರೀಶ್ ಮಾತನಾಡಿ 3303 ಅರ್ಜಿ ಸಲ್ಲಿಸಿದ್ದು, 2470ಅರ್ಜಿ ಬಾಕಿ ಇದೆ. 13 ತರಬೇತಿ ಕೇಂದ್ರಗಳ ಪೈಕಿ ಆರು ತರಬೇತಿ ಕೇಂದ್ರಗಳು ಆರಂಭಗೊಂಡಿದೆ. ಸಂಸ್ಥೆಗಳಲ್ಲಿ ತರಬೇತಿಗೆ ವ್ಯವಸ್ಥೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಯಾವ ಯಾವ ಬ್ಯಾಂಕ್ಗಳಲ್ಲಿ ಎಷ್ಟು ಮಂದಿಗೆ ಸಾಲ ನೀಡಲಾಗಿದೆ ಎಂಬ ಮಾಹಿತಿ ಪಡೆದರು.
ನ.8 ರಂದು ಅರ್ಜಿ ಸಲ್ಲಿಸಿದ ಫಲಾನುಭವಿಗಳಿಗೆ ಮಣಿಪಾಲದ ರಜತಾದ್ರಿಯ ಅಟಲ್ ಸಭಾ ಭವನದಲ್ಲಿ ಕಾರ್ಯಕ್ರಮ ಸಂಘಟಿಸಿ, ಮಂಜೂರಾತಿ ಪತ್ರ ವಿತರಣೆ ಮಾಡುವುದಕ್ಕೆ ನಿರ್ಧರಿಸಲಾಯಿತು. ಈ ಸಂದರ್ಭ ಮುದ್ರಾ ಮತ್ತು ಸ್ವನಿಧಿ ಯೋಜನೆಯ ಫಲಾನುಭವಿಗಳಿಗೂ ಮಂಜೂರಾತಿ ಪತ್ರ ನೀಡುವಂತೆ ಸಂಸದರು ಸೂಚಿಸಿದರು. ಅಲ್ಲದೆ ಈ ಕಾರ್ಯಕ್ರಮಕ್ಕೆ ಕೇಂದ್ರಸಚಿವರನ್ನು ಆಹ್ವಾನಿಸುವ ಪ್ರಯತ್ನ ಮಾಡುವುದಾಗಿ ಅವರು ತಿಳಿಸಿದರು.
ಈ ಸಂದರ್ಭ ಉಡುಪಿ ಜಿಲ್ಲಾಪಂಚಾಯತ್ ಸಿಇಓ ಪ್ರತಿಕ್ ಬಾಯಲ್, ಜಿಲ್ಲಾ ಕೈಗಾರಿಕಾ ಸಂಸ್ಥೆಯ ನಾಗರಾಜ್ ನಾಯಕ್, ಪಿಎಂ ವಿಶ್ವಕರ್ಮ ಯೋಜನಾ ಅಧಿಕಾರಿ ಶ್ರೀನಿವಾಸ ರಾವ್ ಮೊದಲಾದವರು ಇದ್ದರು