ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್‌ನ ಅವ್ಯವಹಾರ ಆರೋಪ ಹಿನ್ನೆಲೆ ಕರಂಬಳ್ಳಿ ವೆಂಕಟರಮಣ ದೇವಸ್ಥಾನದಲ್ಲಿ ನಡೆಯಬೇಕಿದ್ದ ಆಣೆ ಪ್ರಮಾಣದಿಂದ ಎರಡು ತಂಡಗಳು ಹಿಂದಕ್ಕೆ ಸರಿದಿವೆ.

ಸಂತ್ರಸ್ಥರೊಂದಿಗೆ ಮಾಜಿ ಶಾಸಕ ರಘುಪತಿ ಭಟ್, ಬ್ಯಾಂಕಿನ ಜಿಎಂ ಮಹಾಲಕ್ಷ್ಮೀ ಕೋ-ಆಪರೇಟಿವ್ ಬ್ಯಾಂಕ್‌ನ ಸಿಬ್ಬಂದಿಗಳ ಜೊತೆಗೆ ದೇವಸ್ಥಾನಕ್ಕೆ ಬಂದಿದ್ದರು.ಮೊಗವೀರ ಸಮುದಾಯದ ಮುಖಂಡರು ಮತ್ತು ಪೇಜಾವರ ಮತ್ತು ಫಲಿಮಾರು ಸ್ವಾಮೀಜಿಗಳ ಸೂಚನೆ ಮೇರೆಗೆ ಆಣೆ ಪ್ರಮಾಣ ಮಾಡಿಲ್ಲ. ಆದರೆ ಸಂತ್ರಸ್ಥರು ತೆಗೆದುಕೊಂಡ ಹಣವನ್ನು ಪ್ರಾಮಾಣಿಕವಾಗಿ ವಾಪಾಸು ಮಾಡುವುವ ಬಗ್ಗೆ ಸಂಕಲ್ಪ ಮಾಡಲಾಗಿದೆ.

ಈ ಸಂದರ್ಭ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ಹಲವಾರು ಮಂದಿ ಸಹಿಯನ್ನೇ ಹಾಕಿಲ್ಲ. ಆದರೂ ಅವರ ಹೆಸರಿನಲ್ಲಿ ಲೋನ್ ಇದೆ. ಬೋಟಿಗೆಂದು ಸಹಿ ತೆಗೆದುಕೊಂಡು ಹಣವನ್ನು ನೀಡದೇ ಸಾಲ ನೀಡಲಾಗಿದೆ ಎಂದು ಹೇಳುತ್ತಿದ್ದಾರೆ. ಇಲ್ಲಿನ ಮುಖ್ಯಪ್ರಾಣ ಮಹಾನ್ ಶಕ್ತಿಶಾಲಿ, ದೇವರ ಎದುರು ಸುಳ್ಳು ಹೇಳುವುದು ಸರಿಯಲ್ಲ. ಈ ಕಾರಣಕ್ಕಾಗಿ ಒಂದು ರೂಪಾಯಿಯೂ ಹೆಚ್ಚು ಕಡಿಮೆಯಾಗದಂತೆ ಎಷ್ಟು ಸಾಲ ಪಡೆಯಲಾಗಿದೆಯೋ ಅಷ್ಟನ್ನು ಮಾತ್ರ ಬರೆದು ವಾಪಾಸು ನೀಡುವ ಸಂಕಲ್ಪ ಮಾಡಲಾಗುವುದು ಎಂದರು.
ಇದಕ್ಕೆ ಪ್ರತ್ಯುತ್ತರವಾಗಿ ಮಾತನಾಡಿದ ಬ್ಯಾಂಕಿನ ಎಂಡಿ ಶರತ್‌ಕುಮಾರ್ ಶೆಟ್ಟಿ, ಮಲ್ಪೆ ಬ್ರಾಂಚಿನಲ್ಲಿ ಕೋಟಿ ಕೋಟಿ ಅವ್ಯವಹಾರ ನಡೆದಿದೆ ಎಂಬುದು ಸುಳ್ಳು ಆರೋಪ, ದಾಖಲೆ ಪತ್ರ ಇಲ್ಲದ ಆರೋಪದಿಂದ ಬ್ಯಾಂಕಿಗೆ, ಬ್ಯಾಂಕ್ ಸಿಬ್ಬಂದಿಗೆ ಧಕ್ಕೆ ಆಗಿದೆ. ಬ್ಯಾಂಕಿನ ವಿಚಾರದಲ್ಲಿ ನಡೆದ ಅಪಪ್ರಚಾರದಿಂದ ಬ್ಯಾಂಕಿಗೆ ಅಪಾರ ನಷ್ಟವಾಗುತ್ತಿದೆ. ಗ್ರಾಹಕರ ವಿಚಾರದಲ್ಲಿ ಸಹಕಾರಿ ಸಂಘದಲ್ಲಿ ಕಾನೂನುನಾತ್ಮಕ ಹೋರಾಟ ಮಾಡುತ್ತೇವೆ. ಆರೋಪಗಳೆಲ್ಲ ಸತ್ಯಕ್ಕೆ ದೂರ ದೇವರ ಸನ್ನಿಧಿಯಲ್ಲಿ ನ್ಯಾಯಕ್ಕಾಗಿ ನಾವು ಪ್ರಾರ್ಥನೆ ಮಾಡಿದ್ದೇವೆ ಎಂದರು.
ಇದಕ್ಕೆ ಉತ್ತರಿಸಿದ ದೇವಸ್ಥಾನದ ಪ್ರಧಾನ ಅರ್ಚಕ ಯಾವುದೇ ಕಾರಣಕ್ಕೂ ಆಣೆ ಪ್ರಮಾಣದ ಪರಿಸ್ಥಿತಿ ಬರಬಾರದು. ಅದನ್ನು ಆ ಹಂತದ ಪೂರ್ವದಲ್ಲೇ ಇತ್ಯರ್ಥ ಮಾಡಿಕೊಳ್ಳಬೇಕು. ಇಲ್ಲ ಕಾನೂನು ಪ್ರಕಾರದಲ್ಲಿ ಇತ್ಯರ್ಥ ಮಾಡಿಕೊಳ್ಳಬೇಕು. ಆಣೆ ಪ್ರಮಾಣ ಎನ್ನುವುದು ನಮ್ಮ ಕಣ್ಣನ್ನು ನಾವೇ ಚುಚ್ಚಿಕೊಂಡತೆ ಎಂದು ಬುದ್ದಿವಾದ ಹೇಳಿದರು.