ನ್ಯೂಸ್‌ರೇʼಸ್ ಡಾಟ್ ಇನ್ ವರದಿ
ಕೇಂದ್ರ ಸರಕಾರದ ಯೋಜನೆಗಳಾದ ವಿಶ್ವಕರ್ಮ, ಸ್ವನಿಧಿ, ಮುದ್ರಾ ಯೋಜನೆ, ಸ್ಟಾರ್ಟ್‌ಅಪ್ ಮೊದಲಾದ ಯೋಜನೆಗಳಿಗೆ ಸಂಬಂಧಿಸಿದಂತೆ ಸಾಲ ನೀಡಲು ಯಾವುದೇ ವಿಳಂಬ ಮಾಡುವುದು ಸರಿಯಲ್ಲ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ತಾಕೀತು ಮಾಡಿದರು.
ಅವರು ರಜತಾದ್ರಿಯ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಜಿಲ್ಲಾಡಳಿತ, ಲೀಡ್ ಬ್ಯಾಂಕ್ ಜತೆ ವಿಶ್ವಕರ್ಮ ಸೇರಿದಂತೆ ಕೇಂದ್ರ ಸರಕಾರದ ವಿವಿಧ ಸಾಲಸೌಲಭ್ಯ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಉಡುಪಿ ಜಿಲ್ಲೆಯಲ್ಲಿ 4465 ಮಂದಿ ಸ್ವನಿಧಿಯ ಮೊದಲ ಹಂತದ ಸಾಲವನ್ನು ಪಡೆದಿದ್ದು, ಎರಡನೇ ಮತ್ತು ಮೂರನೇ ಹಂತದ ಸಾಲ ಸೌಲಭ್ಯಕ್ಕಾಗಿ ಕಾಯುತ್ತಿದ್ದಾರೆ. ಎರಡನೇ ಹಂತದ ಸಾಲ ಸೌಲಭ್ಯವನ್ನು 2865 ಮಂದಿ ಪಡೆದಿದ್ದಾರೆ. ಮೂರನೇ ಹಂತದ ಸಾಲಸೌಲಭ್ಯವನ್ನು 845 ಮಂದಿ ಪಡೆದಿದ್ದಾರೆ. ಪ್ರಥಮ ಹಂತ ಪಡೆದು ಬಾಕಿ ಉಳಿದಿರುವ ಎಲ್ಲರಿಗೂ ಎರಡನೇ ಮತ್ತು ಮೂರನೇ ಹಂತದ ಸಾಲ ಸೌಲಭ್ಯವನ್ನು ನೀಡಬೇಕೆಂದು ಬ್ಯಾಂಕ್ ಅಧಿಕಾರಿಗಳಿಗೆ ಕಡಕ್ ಸೂಚನೆ ನೀಡಿದರು.
ಈ ಸಂದರ್ಭ ನ.8ರಂದು ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿರುವ ಮಂಜೂರಾತಿ ಪತ್ರ ವಿತರಣಾ ಕಾರ್ಯಕ್ರಮದ ಬಗ್ಗೆ ಚರ್ಚೆ ನಡೆಸಿ, ಪ್ರತಿ ಬ್ಯಾಂಕಗಳಿಂದ ಕನಿಷ್ಠ 100 ಮಂದಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರವನ್ನು ಈ ಕಾರ್ಯಕ್ರಮದಲ್ಲಿ ನೀಡಬೇಕೆಂದು ಸೂಚಿಸಿದರು. ಈ ಸಂದರ್ಭ ವಿವಿಧ ಬ್ಯಾಂಕ್‌ಗಳಿಂದ ಸಾಲ ಮಂಜೂರಾತಿ ಕುರಿತು ಮಾಹಿತಿ ಪಡೆದ ಕೋಟ, ಸಾಲ ನೀಡುವಲ್ಲಿ ಯಾವುದೇ ಹಿಂಜರಿಕೆ ಬೇಡ. ಪ್ರತಿಯೊಬ್ಬ ಸ್ವಾವಲಂಬಿಯಾಗಿ ಕೆಲಸ ಮಾಡಿ ತನ್ನ ಗುರಿ ಸಾಧಿಸಬೇಕೆನ್ನುವುದು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಕನಸಾಗಿದೆ. ಈ ಕನಸು ನೆರವೇರಲು ಪ್ರತಿ ಬ್ಯಾಂಕ್ ಸಿಬ್ಬಂದಿಗಳು ಕೆಲಸ ಮಾಡಬೇಕು. ಆಗ ಮಾತ್ರ ಪ್ರಧಾನಮಂತ್ರಿಯವರ ಕನಸಿನ ಸ್ವಾವಲಂಬಿ ಭಾರತವಾಗಲು ಸಾಧ್ಯ ಎಂದರು.
ಈ ಸಂದರ್ಭ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಿಕ್ ಬಾಯಲ್, ಲೀಡ್ ಬ್ಯಾಂಕ್‌ನ ಪ್ರಭಂದಕ ಹರೀಶ್ ಉಪಸ್ಥಿತರಿದ್ದರು.
ಯಾವುದೇ ಬ್ಯಾಂಕ್ ಸಾಲ ನೀಡಲು ಹಿಂಜರಿದರೆ ನನ್ನನ್ನು ಸಂಪರ್ಕಿಸಿ
ಯಾವುದೇ ಬ್ಯಾಂಕ್‌ಗಳಲ್ಲಿ ಕೇಂದ್ರ ಸರಕಾರದ ಯೋಜನೆಗಳಿಗೆ ಸಾಲ ನೀಡಲು ಹಿಂಜರಿದರೆ ನನ್ನನ್ನು ಸಂಪರ್ಕಿಸಿ, ನಾನು ಬ್ಯಾಂಕಿನ ಜತೆ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಕೋಟ ಶ್ರೀನಿವಾಸ ಪೂಜಾರಿ ಮಾಧ್ಯಮಗಳಿಗೆ ತಿಳಿಸಿದರು. ಅಲ್ಲದೆ ನವೆಂಬರ್ 8ರಂದು ರಜತಾದ್ರಿಯ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ನಡೆಯಲಿರುವ ಈ ಸಮಾವೇಶದಲ್ಲಿ ಫಲಾನುಭವಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಮಾವೇಶವನ್ನು ಯಶಸ್ವಿಗೊಳಿಸಬೇಕೆಂದು ಕೋರಿದರು.