ಮಂಗಳೂರು: ಕಾರವಾರದಿಂದ ಕೊಚ್ಚಿಯತ್ತ ಹೈಡ್ರೋಕ್ಲೋರಿಕ್ ಅನಿಲ ಸಾಗಿಸುತ್ತಿದ್ದ ಟ್ಯಾಂಕರ್ ಕೋಟೆಕಾರ್ ಉಚ್ಚಿಲ ಸಮೀಪ ಸೋರಿಕೆಯಾಗಿದ್ದು, ಅಗ್ನಿಶಾಮಕ ದಳ, ಎಸ್‌ಡಿಆರ್‌ಎಫ್ ಹಾಗೂ ಬಿಎಎಸ್ಎಫ್ ತಂಡ ನಿರಂತರ ಕಾರ‍್ಯಾಚರಣೆ ನಡೆಸಿ ಮೂಲಕ ಟ್ಯಾಂಕರಿನಲ್ಲಿದ್ದ 33,000 ಲೀ. ಐಬಿಸಿಯನ್ನು ಬೇರೆ ಟ್ಯಾಂಕರ್‌ಗೆ ವರ್ಗಾಯಿಸಲಾಗುತ್ತಿದೆ.

ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕೇರಳದ ಕೊಚ್ಚಿಯತ್ತ ತೆರಳುತ್ತಿದ್ದ ಟ್ಯಾಂಕರಿನಲ್ಲಿ ಸೋರಿಕೆ ಉಂಟಾಗಿದೆ. ಕೋಟೆಕಾರು ಉಚ್ಚಿಲ ಸಮೀಪ ಬೇರೆ ವಾಹನದ ಚಾಲಕರ ಸೂಚನೆ ಮೇರೆಗೆ ಟ್ಯಾಂಕರ್ ಅನ್ನು ಚಾಲಕ ರಸ್ತೆಬದಿಯಲ್ಲಿ ನಿಲ್ಲಿಸಿದ್ದಾರೆ. ಈ ವೇಳೆ ಟ್ಯಾಂಕರಿನೊಳಗಿದ್ದ ಹೈಡ್ರೋಕ್ಲೋರಿಕ್ ಅನಿಲ ಸೋರಿಕೆಯಾಗುವುದನ್ನು ಗಮನಿಸಿ, ಸ್ಥಳೀಯ ಉಳ್ಳಾಲ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳೂರು ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಮತ್ತು ಉಳ್ಳಾಲ ಠಾಣೆಯ ಪೊಲೀಸರು ಆಗಮಿಸಿ ಅಗ್ನಿ ಶಾಮಕ ದಳ ಠಾಣೆಗೆ ಮಾಹಿತಿ ನೀಡಿದ್ದಾರೆ. ಸೋರಿಕೆ ನಿರಂತರವಾಗುತ್ತಿದ್ದ ನಡುವೆ ಎಂಸೀಲ್ ಹಾಕಿ ಅನಿಲವನ್ನು ತಡೆಯುವ ಪ್ರಯತ್ನ ನಡೆಯಿತು. ಆದರೆ ಅದು ಯಶಸ್ವಿಯಾಗಲಿಲ್ಲ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ಸೋರಿಕೆಯಾಗುತ್ತಲೇ ಇತ್ತು. ಘಟನಾ ಸ್ಥಳಕ್ಕೆ ತಹಶೀಲ್ದಾರ್ ಪುಟ್ಟರಾಜು, ಕೋಟೆಕಾರು ಗ್ರಾಮಕರಣಿಕೆ ನಯನಾ ಸೇರಿದಂತೆ ಕಂದಾಯ ಇಲಾಖೆ ಭೇಟಿ ಕೊಟ್ಟು, ಅಪಾಯದ ಮುನ್ಸೂಚನೆ ಅರಿತು ಜಿಲ್ಲಾಡಳಿತಕ್ಕೆ ಮಾಹಿತಿ ರವಾನಿಸಿದ್ದಾರೆ.
ಜಿಲ್ಲಾಡಳಿತದಿಂದ ರಾಸಾಯನಿಕ ಅವಘಢಗಳಿಗೆ ಸಂಬಂಧಿಸಿದ ತುರ್ತು ಕಾರ‍್ಯಚರಣೆ ಕೈಗೊಳ್ಳುವ ಎಂಸಿಎಫ್, ಬಿಎಎಸ್ಎಫ್ ಹಾಗೂ ಎಸ್‌ಡಿಆರ್‌ಎಫ್‌ಗೆ ಸೂಚನೆ ನೀಡಲಾಯಿತು. ಅನಿಲ ಸ್ಥಳಾಂತರಿಸುವ ಎಸ್‌ಎಪಿಎ ಮಾದರಿ ಬಿಎಎಸ್‌ಎಫ್ ಸಂಸ್ಥೆಯಲ್ಲಿ ಮಾತ್ರ ಇರುವುದರಿಂದ ಅವರಿಂದಲೇ ಕಾರ‍್ಯಾಚರಣೆ ನಡೆಸಲಾಗಿದೆ. ಟ್ಯಾಂಕರಿನೊಳಕ್ಕೆ ಒಟ್ಟು 33,000 ಲೀ. ಅನಿಲವಿತ್ತು.
ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ ಒಳಪ್ರದೇಶದಲ್ಲಿ ಕೆಲವೇ ಮೀಟರ್ ಹಂತದಲ್ಲಷ್ಟೇ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗಿತ್ತು. ವಾಹನಗಳಾಗಲಿ, ಜನಸಂಚಾರವಾಗಲಿ ನಿರ್ಭಂಧಿಸಲಾಗಿಲ್ಲ.