ಮಂಗಳೂರು: ಕಾಸರಗೋಡು ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ತೀರ್ಥ ಸ್ವಾಮಿಗಳ ಕಾರಿನ ಮೇಲೆ ಬೋವಿಕ್ಕಾನ ಬಳಿ ನಡೆದ ದಾಳಿಯ ಹಿನ್ನೆಲೆಯಲ್ಲಿ ದ.ಕ.ಜಿಲ್ಲೆಯ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಅವರು ಮಠಕ್ಕೆ ಆಗಮಿಸಿ ಸ್ವಾಮೀಜಿಯನ್ನು ಭೇಟಿ ಮಾಡಿ ಘಟನೆಯ ಬಗ್ಗೆ ಮಾಹಿತಿ ಪಡೆದರು.
ಬಳಿಕ ನಳಿನ್ ಕುಮಾರ್ ಕಟೀಲು ಮಾತನಾಡಿ, ಸ್ವಾಮೀಜಿಗಳ ಧಾರ್ಮಿಕ ಪ್ರವಾಸದ ವೇಳೆ ಈ ಘಟನೆ ನಡೆದಿರುವುದು ಖಂಡನಾರ್ಹ. ಸಾಮರಸ್ಯದ ಸಂಕೇತವಿರುವ ಎಡನೀರು ಮಠ ಎಲ್ಲಾ ಧರ್ಮಗಳಿಗೂ ನಿರಂತರವಾಗಿ ಪ್ರೇರಣೆ ನೀಡಿರುವ ಮಠ. ಅಂತಹ ಮಠದ ಪೀಠಾಧಿಪತಿಗಳ ಕಾರಿನ ಮೇಲೆ ಕಲ್ಲು ತೂರಾಟ ನಡೆದಿರುವುದು ಆಘಾತ ತಂದಿದೆ. ಕೇರಳದಲ್ಲಿ ಸ್ವಾಮೀಜಿಗಳಿಗೆ ಹೀಗೆ ಆದಲ್ಲಿ ಜನಸಾಮಾನ್ಯರ ಗತಿಯೇನು ಎಂಬಂತಹ ಸ್ಥಿತಿಯಾಗಿದೆ ಎಂದರು.
ಕೇರಳ ಸರಕಾರ ಸುಮೋಟೊ ಕೇಸು ದಾಖಲಿಸಿ ಆರೋಪಿಗಳನ್ನು ಬಂಧಿಸಬೇಕಿತ್ತು. ಆದರೆ ಘಟನೆ ನಡೆದು ಎರಡು ದಿನವಾದರೂ ಆರೋಪಿಗಳ ಬಂಧನವಾಗಿಲ್ಲ. ಮತಬ್ಯಾಂಕ್ ಹಿಂದಿಯಿರುವ ಕಮ್ಯುನಿಸ್ಟ್ ಸರಕಾರದ ಸಿಎಂ ಪಿಣರಾಯಿ ವಿಜಯನ್ ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು. ಇವತ್ತಿನವರೆಗೆ ಅಲ್ಲಿನ ಗೃಹಸಚಿವರು ಯಾವುದೇ ಹೇಳಿಕೆ ನೀಡದಿರುವುದು ನೋಡಿದರೆ ಶಾಂತಿ ಸುವ್ಯವಸ್ಥೆ ಕಾಪಾಡಲು ಕೇರಳ ಸರಕಾರ ವಿಫಲವಾಗಿದೆ. ಸ್ವಾಮೀಜಿಯೊಬ್ಬರಿಗೆ ಹೀಗಾದಾಗ ಮೌನವಾಗಿರುವ ಸರ್ಕಾರದ ನಡೆ ಏನು? ಎಂಬುದನ್ನು ಪ್ರಶ್ನಿಸಬೇಕಾಗುತ್ತದೆ. ಕಮ್ಯುನಿಸ್ಟ್ ಸರಕಾರ ಪ್ರಜಾಸತ್ತಾತ್ಮಕ ಆಧಾರದಲ್ಲಿ ಸರಕಾರ ಮಾಡುತ್ತಿದೆಯೋ, ಅಥವಾ ಕೋಮು, ಮತಾಂಧ ಶಕ್ತಿಗಳ ಹಿಂದೆ ಈ ಸರಕಾರ ಕೆಲಸ ಮಾಡುತ್ತಿದೆಯೇ ಅನ್ನಿಸುತ್ತಿದೆ. ಸ್ವಾಮೀಜಿಗಳ ಹಿಂದೆ ಇಡೀ ಹಿಂದೂಸಮಾಜ ಇರುತ್ತದೆ. ಹಿಂದೂ ಸಮಾಜ ಕೈಕಟ್ಟಿಕೊಂಡು ಕೂರುವ ಸಮಾಜವಲ್ಲ ಎಂದು ಎಚ್ಚರಿಕೆ ನೀಡಿದರು.