ಹರೀಶ್ ಕಿರಣ್ ತುಂಗ, ಸಾಸ್ತಾನ
ಉಡುಪಿ: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿ ಸರ್ವರ್ ಸಮಸ್ಯೆಯಿಂದ ರೋಗಿಗಳು ಗಂಟೆಗಟ್ಟಲೆ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ.
ಸರಕಾರಿ ಆಸ್ಪತ್ರೆಗಳಲ್ಲಿ ಪ್ರತಿ ಚಿಕಿತ್ಸೆ ಮತ್ತು ಪರೀಕ್ಷೆಗಳಿಗೆ ಬಿಲ್ ಮಾಡಿದ ಬಳಿಕವೇ ಚಿಕಿತ್ಸೆ ನೀಡಲಾಗುತ್ತದೆ. ಆದರೆ ಬಿಲ್ ಮಾಡಲೆಂದು ಹೋದರೆ ಸರ್ವರ್ ಇಲ್ಲ. ತುರ್ತು ಸಂದರ್ಭಗಳಲ್ಲಿ ಚಿಕಿತ್ಸೆ ನೀಡಿ ಸರ್ವರ್ ಬಂದ ಬಳಿಕ ಬಿಲ್ ಮಾಡಲಾಗುತ್ತಿದೆ. ಆದರೆ ಹೊರ ರೋಗಿಗಳಿಗೆ ಬಿಲ್ ಆಗದೆ ಸಮಸ್ಯೆಯಾಗುತ್ತಿದೆ. ಲ್ಯಾಬ್ ಪರೀಕ್ಷೆ ಸಂದರ್ಭಗಳಲ್ಲಿ ಬಿಲ್ ಆಗದೆ ಸೇವೆ ನೀಡಲು ಆಗುತ್ತಿಲ್ಲ.
ಕೆಲವೊಮ್ಮೆ ಶೀಘ್ರ ಸರ್ವರ್ ಸಮಸ್ಯೆ ಪರಿಹಾರಗೊಂಡರೂ; ಇನ್ನು ಕೆಲವೊಮ್ಮ ಗಂಟೆಗಟ್ಟಲೆ ಸಮಯ ತೆಗೆದುಕೊಳ್ಳುತ್ತದೆ.
ಸಮಸ್ಯೆ ಏನು?
ದೇಶದ ಎಲ್ಲಾ ಸರ್ವರ್‌ಗಳನ್ನು ಎನ್.ಐ.ಸಿ (NIC) ನಿರ್ವಹಿಸುತ್ತದೆ. ಎನ್‌ಐಸಿ ಅಡಿಯಲ್ಲಿ ಪ್ರತಿ ರಾಜ್ಯಗಳಿಗೆ ಸರ್ವರ್‌ಗಳ ಹಂಚಿಕೆ ಮಾಡಲಾಗುತ್ತದೆ. ರಾಜ್ಯ ಸರಕಾರ ಆ ಸರ್ವರ್‌ಗಳನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡುತ್ತದೆ. ಒಂದೇ ಸರ್ವರ್‌ನಲ್ಲಿ ಅಧಿಕ ಒತ್ತಡವಿರುವ ಇಲಾಖೆಗಳಿಗೆ ಹಂಚಿಕೆ ಮಾಡುವುದರಿಂದ ಈ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇದೆ. ಇತ್ತಿಚೀಗೆ ಪಡಿತರ ಚೀಟಿ ತಿದ್ದುಪಡಿಗೆ ಅವಕಾಶ ನೀಡಿದಾಗ ಕೂಡ ಸರ್ವರ್ ಸಮಸ್ಯೆ ಎದುರಾಗಿತ್ತು. ಆರೋಗ್ಯ ಇಲಾಖೆಯಲ್ಲಿಯೂ ಇತ್ತೀಚಿನ ದಿನಗಳಲ್ಲಿ ಈ ಸರ್ವರ್ ಇಲ್ಲ ಎನ್ನುವ ಸಮಸ್ಯೆ ಸಾಕಷ್ಟು ಹೆಚ್ಚಿದೆ.
ಭಾರತೀಯನ ಮೂಲಭೂತ ಅವಶ್ಯಕತೆಯಲ್ಲಿ ಆರೋಗ್ಯ ಕೂಡ ಒಂದು. ಸರಕಾರ ಆರೋಗ್ಯ ಇಲಾಖೆಯನ್ನು ಬಲಪಡಿಸುವಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಸರ್ವರ್ ಸಮಸ್ಯೆಯಿಂದ ಅಶಕ್ತ ರೋಗಿಗಳು ಪರದಾಡುವಾಗುವಂತಾಗಬಾರದು. ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರ ಜಂಟಿಯಾಗಿ ಈ ಸರ್ವರ್ ಸಮಸ್ಯೆಗೆ ಒಂದು ಮುಕ್ತಿ ಕಾಣಿಸಬೇಕಿದೆ.
ಆಸ್ಪತ್ರೆಗಳಲ್ಲಿ ಸರ್ವರ್ ಸಮಸ್ಯೆ ಇರುವ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಇಲಾಖೆ ತಿಳಿಸಿದೆ
ಡಾ. ಅಶೋಕ್, ಜಿಲ್ಲಾ ಸರ್ಜನ್ ಉಡುಪಿ
ನಾನು ಹಲವು ಬಾರಿ ಆಸ್ಪತ್ರೆಗೆ ಭೇಟಿ ನೀಡದಾಗಲೂ ಸರ್ವರ್ ಸಮಸ್ಯೆ ಕಂಡು ಬಂದಿದೆ. ಮಧ್ಯಾಹ್ನ ವೇಳೆ ಭೇಟಿ ನೀಡಿದಾಗ ಸರ್ವರ್ ಇಲ್ಲವಾದರೆ ಮತ್ತೇ ಮಾರನೇ ದಿನ ಬರಬೇಕು. ಇದರಿಂದ ಸಾಕಷ್ಟು ಸಮಸ್ಯೆಯಾಗುತ್ತದೆ. ದೂರದ ಊರಿನಿಂದ ಬರುವ ಗರ್ಭಿಣಿ ಮಹಿಳೆಯರು, ವಯಸ್ಸಾದರಿಗೆ ಪದೇ ಪದೇ ಆಸ್ಪತ್ರೆಗೆಂದು ಬರುವುದು ಬಹಳ ಕಷ್ಟ.
– ಸತೀಶ್, ಮಂದಾರ್ತಿ