ಕೋಟ: ನಿದ್ರೆ ಮಂಪರಿನಲ್ಲಿ ವಾಹನ ಚಲಾಯಿಸಿದ ಪರಿಣಾಮ ಕೋಳಿಸಾಗಾಟ ವಾಹನ ಪಲ್ಟಿಯಾಗಿ ನೂರಾರು ಕೋಳಿಗಳು ಸಾವನ್ನಪ್ಪಿದ ಘಟನೆ ಕೋಟದ ಮಣೂರಿನಲ್ಲಿ ಭಾನುವಾರ ಬೆಳಗ್ಗಿನ ಜಾವ ಸಂಭವಿಸಿದೆ.

ಸಾಲಿಗ್ರಾಮದ ಗಿರಿಮುತ್ತು ಸಂಸ್ಥೆಗೆ ಸೇರಿದ ಕೋಳಿಸಾಗಾಟ ವಾಹನ ಇದಾಗಿದ್ದು, ಕುಂದಾಪುರ ಕಡೆಯಿಂದ ಕೋಳಿ ತುಂಬಿಸಿಕೊಂಡು ಸಂತೆಕಟ್ಟೆ ಕಡೆಗೆ ತೆರಳುತ್ತಿತ್ತು ಎನ್ನಲಾಗಿದೆ. ಮಣೂರು ಬಸ್ ನಿಲ್ದಾಣದ ಎದುರು ಬಂದಾಗ ನಿದ್ರೆ ಮಂಪರಿನಲ್ಲಿದ್ದ ಚಾಲಕ ಸರ್ವಿಸ್ ರೋಡ್ನ ಡಿವೈಡರ್ಗೆ ತಾಗಿಸಿದ್ದಾನೆ. ಇದರಿಂದ ವಾಹನ ಎರಡು ಸುತ್ತು ಪಲ್ಟಿ ಹೊಡೆದು ನಿಂತಿದೆ.
ಅಪಘಾತ ನಡೆದ ಸಂದರ್ಭ ಜೀವನ್ ಮಿತ್ರ ನಾಗರಾಜ್ ಪುತ್ರನ್ ಮತ್ತು ಸ್ಥಳೀಯರು ತಕ್ಷಣ ಸಹಾಯಕ್ಕೆ ಆಗಮಿಸಿ, ಚಾಲಕನನ್ನು ರಕ್ಷಿಸಿ, ಟೋಲ್ ಅಂಬ್ಯೂಲೆನ್ಸ್ ಮೂಲಕ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಕೋಟ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದ್ದಾರೆ.