ಮಂಗಳೂರು: ದ.ಕ.ಜಿಲ್ಲೆಯ ಇತಿಹಾಸ ಪ್ರಸಿದ್ಧ ನಾಗಾರಾಧನಾ ಕ್ಷೇತ್ರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವರ ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವವವು ಗುರುವಾರ ಕೊಪ್ಪರಿಗೆ ಇಳಿಯುವುದರೊಂದಿಗೆ ಸಂಪನ್ನಗೊಂಡಿತು.
ವೈದಿಕ ವಿಧಿವಿಧಾನಗಳನ್ನು ನೆರವೇರಿದ ಬಳಿಕ ಪೂರ್ವಶಿಷ್ಠ ಸಂಪ್ರದಾಯದ ಪ್ರಕಾರ ಸುಮುಹೂರ್ತದಲ್ಲಿ ಕೊಪ್ಪರಿಗೆಯನ್ನು ಇಳಿಸಲಾಯಿತು. ಬಳಿಕ ಭಕ್ತಾದಿಗಳು ಶ್ರೀದೇವರ ಕೊಪ್ಪರಿಗೆ ಅನ್ನದ ಪ್ರಸಾದ ಭೋಜನ ಸ್ವೀಕರಿಸಿದರು.
ಉತ್ಸವದ ನಿಮಿತ್ತ ದೇವಸ್ಥಾನದ ಹೊರಾಂಗಣದ ಸುತ್ತಲೂ ನೀರನ್ನು ತುಂಬಿಸಲಾಯಿತು. ರಾತ್ರಿ ಮಹಾಪೂಜೆಯ ಬಳಿಕ ನೀರಿನಲ್ಲಿ ಶ್ರೀ ದೇವರ ದೀಪಾರಾಧನೆಯುಕ್ತ ಪಾಲಕಿ ಉತ್ಸವ ಆರಂಭವಾಯಿತು. ನೀರಿನಲ್ಲಿ ಶ್ರೀ ದೇವರ ಶೇಷವಾಹನಯುಕ್ತ ಬಂಡಿ ರಥೋತ್ಸವ ನಡೆಯಿತು. ವರ್ಷದಲ್ಲಿ ಒಮ್ಮೆ ಮಾತ್ರ ನಡೆಯುವ ಈ ಉತ್ಸವವು ಬೇರೆ ಯಾವುದೇ ದೇವಳದಲ್ಲಿ ಕಾಣಸಿಗುವುದಿಲ್ಲ. ಈ ಉತ್ಸವದೊಂದಿಗೆ ಚಂಪಾಷಷ್ಠಿ ಉತ್ಸವ ಸಮಾಪ್ತಿಗೊಂಡಿತು. ನೀರ ಬಂಡಿ ಉತ್ಸವದಲ್ಲಿ ದೇವಸ್ಥಾನದ ಗಜರಾಣಿ ಯಶಸ್ವಿನಿ ನೀರಾಟವಾಡಿ ಸಂತಸಗೊಂಡಿತು. ಈ ಸಂದರ್ಭ ಮಕ್ಕಳು, ಹಿರಿಯರೊಂದಿಗೆ ನೀರಾಟವಾಡಿ ಸಂಭ್ರಮಿಸಿದರು.