ಬಂಟ್ವಾಳ: ಇಲ್ಲಿನ ವಗ್ಗ ಸಮೀಪದ ಬಾಂಬಿಲ ಎಂಬಲ್ಲಿ ಕಾರು ಮತ್ತು ರಿಕ್ಷಾ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಿಳೆಯೋರ್ವರು ಸ್ಥಳದಲ್ಲಿಯೇ ಮೃತಪಟ್ಟು ರಿಕ್ಷಾದಲ್ಲಿದ್ದ ಮಕ್ಕಳು ಸಹಿತ ಎಂಟು ಮಂದಿಗೆ ಗಾಯವಾಗಿದೆ. ಗಾಯಾಳುಗಳನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಪಂಜಿಕಲ್ಲು ಬಾಂದೊಟ್ಟು ನಿವಾಸಿ ತಿಲಕ (40) ಎಂಬವರು ಮೃತಪಟ್ಟ ದುರ್ದೈವಿ. ರಿಕ್ಷಾದಲ್ಲಿದ್ದ ಯಶಸ್ವಿನಿ, ಗೀತಾ, ರೇವತಿ, ಸರಸ್ವತಿ, ವೇದಾವತಿ, ರಾಜೀವಿ ಮತ್ತು ಮಕ್ಕಳಾದ ದಿಗಂತ್ ಹಾಗೂ ದಿಶಾನಿ ಗಾಯಗೊಂಡವರು.
ರಿಕ್ಷಾದಲ್ಲಿದ್ದವರು ಮದ್ವದಲ್ಲಿ ಸೀಮಂತ ಕಾರ್ಯಕ್ರಮಕ್ಕೆ ಹೋಗಿ ವಾಪಸು ಮನೆಗೆ ಬರುತ್ತಿದ್ದರು. ರಿಕ್ಷಾ ಬಾಂಬಿಲ ತಲುಪುತ್ತಿದ್ದಂತೆ ಮಂಗಳೂರಿನಿಂದ ಪುಂಜಾಲಕಟ್ಟೆ ಕಡೆಗೆ ತೆರಳುತ್ತಿದ್ದ ರಿಟ್ಜ್ ಕಾರು ರಿಕ್ಷಾಕ್ಕೆ ಡಿಕ್ಕಿಯಾಗಿದೆ. ಅಪಘಾತದಲ್ಲಿ ತಿಲಕ ಸ್ಥಳದಲ್ಲಿಯೇ ಮೃತಪಟ್ಟರೆ ಉಳಿದವರಿಗೆ ಗಂಭೀರವಾಗಿ ಗಾಯವಾಗಿದೆ ಎನ್ನಲಾಗಿದೆ.
ಈ ಬಗ್ಗೆ ಪಾಣೆಮಂಗಳೂರು ಟ್ರಾಫಿಕ್ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.