ಮಂಗಳೂರು: ನಂತೂರು-ಸುರತ್ಕಲ್ ರಾಷ್ಟ್ರೀಯ ಹೆದ್ದಾರಿ ಅವ್ಯವಸ್ಥೆಯನ್ನು ಖಂಡಿಸಿ ಸುರತ್ಕಲ್ ಟೋಲ್‌ಗೇಟ್ ವಿರೋಧಿ ಸಮಿತಿಯಿಂದ ಕೂಳೂರು ಸೇತುವೆ ಸಮೀಪ ಹೆದ್ದಾರಿಯ ಬದಿಯಲ್ಲಿ ಸಾಮೂಹಿಕ ಧರಣಿ ನಡೆಯಿತು.
ನಂತೂರಿನಿಂದ ಸುರತ್ಕಲ್ ವರೆಗಿನ ರಾಷ್ಟ್ರೀಯ ಹೆದ್ದಾರಿ ಪೂರ್ಣ ಪ್ರಮಾಣದ ದುರಸ್ತಿಗೆ ಆಗ್ರಹಿಸಿ, ಕೂಳೂರು ಸೇತುವೆ ಕಾಮಗಾರಿ ತಕ್ಷಣ ಪೂರ್ಣಗೊಳಿಸಲು, ನಂತೂರು ಮೇಲ್ಸೇತುವೆ ಕಾಮಗಾರಿ ಕಾಲಮಿತಿಯಲ್ಲಿ ಮುಗಿಸಲು ಒತ್ತಾಯಿಸಿ ಈ ಸಾಮೂಹಿಕ ಧರಣಿ ನಡೆದಿದೆ. ಆದರೆ ಧರಣಿ ನಡೆಸಲು ಮನಪಾ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವ್ಯಾಪ್ತಿಗೆ ಒಳಪಡುವ ಯಾವುದೇ ಇಲಾಖೆಗಳ ಅನುಮತಿ ಪತ್ರ ಪಡೆದಿಲ್ಲ. ಗ್ರಾಪಂ ಚುನಾವಣೆ ಫಲಿತಾಂಶ ಪ್ರಕ್ರಿಯೆ ಇರುವುದರಿಂದ ಕಾವೂರು ಠಾಣೆ ಪ್ರತಿಭಟನೆಗೆ ಅವಕಾಶ ನಿರಾಕರಿಸಿತ್ತು. ಶಾಮಿಯಾನ, ಮೈಕ್ ಅಳವಡಿಕೆಗೂ ಅವಕಾಶ ನಿರಾಕರಿಸಿತ್ತು. ಅನುಮತಿ ನಿರಾಕರಣೆಯ ಹೊರತಾಗಿಯೂ ಪ್ರತಿಭಟನಾಕಾರರು ಉರಿ ಬಿಸಿಲಿನಲ್ಲಿಯೇ ಪ್ರತಿಭಟನೆ ನಡೆಸಿದ್ದಾರೆ.
ಪ್ರತಿಭಟನೆಗೆ ಅವಕಾಶ ನಿರಾಕರಿಸಿರುವ ಪೊಲೀಸ್ ಧೋರಣೆಯನ್ನು ಖಂಡಿಸಿ ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್, ಡಿಸಿಪಿ ಸಿದ್ಧಾರ್ಥ್ ಗೋಯಲ್, ರಾಜ್ಯದ ಕಾಂಗ್ರೆಸ್ ಸರಕಾರದ ವಿರುದ್ಧವೇ ಪ್ರತಿಭಟನಾಕಾರರು ಕಿಡಿಕಾರಿದರು. ಪ್ರತಿಭಟನೆಗೆ ಅವಕಾಶ ನಿರಾಕರಣೆಯನ್ನು ಮೀರಿ ನಾವು ಪ್ರತಿಭಟನೆ ನಡೆಸುತ್ತಿದ್ದೇವೆ. ತಾಕತ್ತಿದ್ದರೆ ಪೊಲೀಸ್ ಕಮಿಷನರ್ ಅವರು ನಮ್ಮ ಮೇಲೆ ಎಫ್ಐಆರ್ ದಾಖಲಿಸಿಲಿ, ಬಂಧನ ಮಾಡಲಿ. ತಾವು ಹೋರಾಟ ಮಾಡುತ್ತಿರುವುದು ನಮ್ಮ ಮನೆಗಲ್ಲ. ಸಾರ್ವಜನಿಕರ ಪ್ರಯೋಜನಕ್ಕಾಗಿ ಮಾಡುತ್ತಿದ್ದೇವೆ. ಬಿಜೆಪಿ ಸರಕಾರ ಇದ್ದಾಗಲೂ ನಮ್ಮ ಮೇಲೆ ಇಷ್ಟೊಂದು ದಬ್ಬಾಳಿಕೆ ಆಗಿರಲಿಲ್ಲ. ಆದರೆ ಕಾಂಗ್ರೆಸ್ ಸರಕಾರದಲ್ಲಿ ಬಿಜೆಪಿ ಧೋರಣೆಯನ್ನು ಜಾರಿಗೊಳಿಸಲಾಗುತ್ತಿದೆ ಎಂದು ಧರಣಿ ನಿರತ ಮುನೀರ್ ಕಾಟಿಪಳ್ಳ ಕಿಡಿಕಾರಿದ್ದಾರೆ.