ಮಣಿಪಾಲ: ನ್ಯೂರೋ ಮತ್ತು ಎನ್ಐಸಿಯು ಬೆಡ್ಗಳ ಕೊರತೆ ನೀಗಿಸಲು ಹೈಟೆಕ್ ಮತ್ತು ಆದರ್ಶ ಆಸ್ಪತ್ರೆಗಳಿಗೆ ಆಯುಷ್ಮಾನ್ ಯೋಜನೆಯಡಿ ವ್ಯವಸ್ಥೆ ಕಲ್ಪಿಸಲು ಸಂಸದ ಕೋಟ ಶ್ರೀನಿವಾಸ ಪೂಜಾರಿ ಸೂಚಿಸಿದರು.
ಅವರು ಬುಧವಾರ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ಆಯುಷ್ಮಾನ್ ಭಾರತ್ ಯೋಜನೆಯ ಕುಂದುಕೊರತೆಗಳ ಸಭೆಯನ್ನುದ್ದೇಶಿಸಿ ಮಾತನಾಡಿ, ಬಡವರ ಆರೋಗ್ಯ ಸಮಸ್ಯೆಗಳಿಗೆ ತುರ್ತು ಪರಿಹಾರ ನೀಡಬೇಕು ಎನ್ನುವ ದೃಷ್ಠಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಿದ್ದಾರೆ. ಈ ಯೋಜನೆಯ ಸಮರ್ಪಕ ಅನುಷ್ಠಾನ ಆಸ್ಪತ್ರೆಗಳು ಕೈ ಜೋಡಿಸಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಉಡುಪಿ ಜಿಲ್ಲೆಯಲ್ಲಿ ಆಯುಷ್ಮಾನ್ ಭಾರತ್ ಯೋಜನೆಗೆ ಸಂಬಂಧಪಟ್ಟಂತೆ ನ್ಯೂರೋ ಮತ್ತು ಎನ್ಐಸಿಯು ಬೆಡ್ಗಳಿಗಾಗಿ ಕೆಎಂಸಿ ಮಣಿಪಾಲವನ್ನು ಮಾತ್ರ ಆಶ್ರಯಿಸಬೇಕಿದೆ. ಇದರಿಂದ ಅಲ್ಲಿ ಕೂಡ ಒತ್ತಡ ಆಗುತ್ತಿದ್ದು, ಉಡುಪಿ ಜಿಲ್ಲೆಯ ಹಲವಾರು ಕೇಸ್ಗಳನ್ನು ಮಂಗಳೂರಿನ ಆಸ್ಪತ್ರೆಗಳಿಗೆ ರೆಫರ್ ಮಾಡಲಾಗುತ್ತಿದೆ. ಜಿಲ್ಲೆಯ ಆದರ್ಶ ಮತ್ತು ಹೈಟೆಕ್ ಆಸ್ಪತ್ರೆಗಳಲ್ಲಿ ಕೂಡ ಕೂಡಲೇ ಆಯುಷ್ಮಾನ್ ಭಾರತ್ ಯೋಜನೆ ಜಾರಿಗೊಳಿಸಬೇಕು ಎಂದು ಅವರು ಸೂಚಿಸಿದರು. ಇದಕ್ಕೆ ಉತ್ತರಿಸಿದ ಡಿಎಚ್ಓ ಡಿಎಚ್ಓ ಈಶ್ವರಪ್ಪ ಗಡಾದ ಕೆಲವೊಂದು ತಾಂತ್ರಿಕ ಕಾರಣಗಳಿಂದ ವಿಳಂಭವಾಗಿದೆ. ಅದು ಈಗ ಪೂರ್ಣಗೊಂಡಿದ್ದು, ಅನುಮತಿಗಾಗಿ ಕಾಯಲಾಗುತ್ತಿದೆ ಎಂದರು.
ಅನುಮತಿ ನೀಡದೇ ಇದ್ದರೂ ಅಲ್ಲಿಗೆ ಕಳುಹಿಸಿದರೆ ಬಿಲ್ ಸಮಸ್ಯೆಯಾಗುತ್ತದಾ? ಎಂದು ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನಿಸಿದರು. ಅನುಮತಿಗೆ ಹೋಗಿರುವುದರಿಂದ ಬಿಲ್ಗೆ ಸಮಸ್ಯೆಯಾಗುವುದಿಲ್ಲ. ಕೂಡಲೇ ನಾವು ಅಲ್ಲಿಗೆ ರೆಫರ್ ಮಾಡಬಹುದು ಎಂದು ಉತ್ತರ ನೀಡಿದರು.
ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಸೇರಿದಂತೆ ಹಲವು ಜಿಲ್ಲೆಗಳ ಜನರಿಗೆ ಉನ್ನತ ಚಿಕಿತ್ಸೆಗಾಗಿ ಕೆಎಂಸಿಯನ್ನೇ ಆಶ್ರಯಿಸಬೇಕಿದೆ. ಆಯುಷ್ಮಾನ್ ಭಾರತ್ ಯೋಜನೆಯಡಿ ಉಡುಪಿ ಜಿಲ್ಲೆಯ ಜನರಿಗೆ ಬೆಡ್ಗಳು ಸಿಗುತ್ತಿಲ್ಲ. ಹಾಗಾಗಿ ಉಡುಪಿ ಜಿಲ್ಲೆಯವರಿಗೆ ಬೆಡ್ ಕಾದಿರಿಸಬೇಕು ಎಂದು ಆರೋಗ್ಯ ಮಿತ್ರ ಕಾರ್ಯಕರ್ತರು ಸಭೆಯಲ್ಲಿ ಆಗ್ರಹ ಮಾಡಿದರು.
ಇದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿ ಡಾ, ಕೆ ವಿದ್ಯಾಕುಮಾರಿ ಆರೋಗ್ಯ ಸೇವೆ ಎನ್ನುವುದು ಎಲ್ಲರಿಗೂ ಅಗತ್ಯವಿರುವುದು, ಹಾಗೆಂದು ಜಿಲ್ಲೆಯವರಿಗೆ ಬೆಡ್ ಮೀಸಲಿಡುವುದು ಸರಿಯಾದ ನಿರ್ಧಾರವಲ್ಲ ಎಂದರು. ಈ ನಡುವೆ ಮಾತನಾಡಿದ ಸಂಸದರು, ಬೆಡ್ ಕಾದಿರಿಸುವುದು ಸಾಧ್ಯವಿಲ್ಲ. ಆದರೆ ಗುಣಮುಖರಾಗುತ್ತಿದ್ದಾರೆ ಡಿಶ್ಚಾರ್ಜ ಮಾಡಿದರೂ ತೊಂದರೆ ಇಲ್ಲ ಎಂದು ಕಂಡು ಬಂದ ರೋಗಿಗಳನ್ನು ಶೀಘ್ರ ಡಿಶ್ಚಾರ್ಜ್ ಮಾಡಿ, ಅವರ ಬದಲಿಗೆ ತುರ್ತಾಗಿ ಅಗತ್ಯವಿರುವ ರೋಗಿಗಳಿಗೆ ಆ ಬೆಡ್ ನಿಗದಿಪಡಿಸುವುದು ಸೂಕ್ತ ಎಂದು ಸಲಹೆ ನೀಡಿದರು.
ಈ ನಡುವೆ ಕೆಎಂಸಿಯ ಬೆಡ್ ಸಮಸ್ಯೆ ಬಗ್ಗೆ ಸಾಕಷ್ಟು ಚರ್ಚೆ ನಡೆದವು, ಕೆಎಂಸಿಯಲ್ಲಿ ಬೇರೆ ವಿಭಾಗದಲ್ಲಿ ಬೆಡ್ಗಳು ಖಾಲಿ ಇದ್ದರೂ ಸ್ವಲ್ಪವೂ ಕೂಡ ಹೊಂದಾಣಿಕೆ ಮಾಡಿಕೊಳ್ಳದೇ ಬೆಡ್ಗಳು ಇಲ್ಲ ಎನ್ನುತ್ತಿರಿ. ನ್ಯೂರೋದಲ್ಲಿ ಬೆಡ್ಗಳು ಖಾಲಿ ಇಲ್ಲದೆ ಇದ್ದರೆ ಕಿಡ್ನಿ ವಿಭಾಗದಲ್ಲಿ ಖಾಲಿ ಇರುತ್ತದೆ ಸ್ವಲ್ಪ ಹೊಂದಾಣಿಕೆ ಮಾಡಿಕೊಳ್ಳಬೇಕು ಎಂದು ಸಂಸದರು ಮತ್ತು ಜಿಲ್ಲಾಧಿಕಾರಿ ಆಗ್ರಹಿಸಿದರು. ಇದಕ್ಕೆ ಕೆಎಂಸಿಯ ಪ್ರತಿನಿಧಿಗಳು ಮಾತನಾಡಿ ಕೆಲವೊಂದು ತಾಂತ್ರಿಕ ಕಾರಣಗಳನ್ನು ನೀಡಿ ಬೆಡ್ಗಳು ನೀಡಲು ಸಾಧ್ಯವಿಲ್ಲ. ಆದರೂ ಅಗತ್ಯವಿದ್ದಾಗ ಬೆಡ್ಗಳನ್ನು ವ್ಯವಸ್ಥೆ ಮಾಡಿದ್ದೇವೆ ಎಂದರು. ಅದಕ್ಕೆ ಜಿಲ್ಲಾಧಿಕಾರಿಗಳು ಉತ್ತರಿಸಿ ಅಗತ್ಯ ಬರುವುದು ಒಂದೋ ಅಥವಾ ಎರಡು ಬೆಡ್ಗಳು ಅದನ್ನು ತುರ್ತು ಸಂದರ್ಭದಲ್ಲಿ ನೀಡಿ ಎಂದರು.
ಅಪಘಾತಗಳಿಗೆ ಸಂಬಂಧಿಸಿದ ಹರೀಶ್ ಸಾಂತ್ವಾನ ಯೋಜನೆಗೆ ಆಯುಷ್ಮಾನ್ ಭಾರತ್ನಡಿ ಉಡುಪಿ ಜಿಲ್ಲೆಯ ಯಾವ ಆಸ್ಪತ್ರೆಗಳು ನೋಂದಣಿ ಮಾಡಿಕೊಂಡಿಲ್ಲ ಎಂದು ಆಯುಷ್ಮಾನ್ ಭಾರತ್ ಯೋಜನೆಯ ನೋಡಲ್ ಅಧಿಕಾರಿ ಡಾ. ಲತಾ ಸಭೆಯ ಗಮನಕ್ಕೆ ತಂದರು. ಈ ಸಮಸ್ಯೆಗೆ ಕಾರಣವೇನು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಳಿದರು. ಇದಕ್ಕೆ ಉತ್ತರಿಸಿದ ಡಾ.ಲತಾ, ಹರೀಶ್ ಸಾಂತ್ವಾನ ಯೋಜನೆಯಡಿ ಕೇವಲ 48 ಗಂಟೆಗಳವರೆಗೆ ಮಾತ್ರ ಚಿಕಿತ್ಸೆ ನೀಡಲು ಅವಕಾಶವಿದೆ. ಆ ಬಳಿಕ ಏನು ಎನ್ನುವುದೇ ಆಸ್ಪತ್ರೆಗಳ ಮುಂದಿರುವ ದೊಡ್ಡ ಸವಾಲು ಈ ಕಾರಣಕ್ಕಾಗಿ ಯಾರೂ ಕೂಡ ನೋಂದಣಿ ಮಾಡಿಕೊಳ್ಳುತ್ತಿಲ್ಲ ಎಂದು ಅವರು ಹೇಳಿದರು. ಇದಕ್ಕೆ ಉತ್ತರಿಸಿದ ಸಂಸದರು ಆರೋಗ್ಯ ಇಲಾಖೆಯ ಆಯುಕ್ತರ ಜೊತೆ ಚರ್ಚೆ ನಡೆಸಿ ಈ ಸಮಸ್ಯೆಗೆ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಈ ಸಂದರ್ಭ ಶಾಸಕ ಯಶಪಾಲ್ ಸುವರ್ಣ, ವಿವಿಧ ಆಸ್ಪತ್ರೆಗಳ ಪ್ರತಿನಿಧಿಗಳು ಇದ್ದರು.