ಪುತ್ತೂರು: ಭಾರೀ ಗಾತ್ರದ ಹೆಬ್ಬಾವೊಂದನ್ನು ಮಹಿಳೆಯೊಬ್ಬರು ಹಿಡಿದು ಗೋಣಿಗೆ ತುಂಬಿಸಿ ಕಾಡಿಗೆ ಬಿಟ್ಟ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು-ಸುಳ್ಯದ ಗಡಿಪ್ರದೇಶದಲ್ಲಿ ನಡೆದಿದೆ. ಈಕೆಯ ಹಾವು ಹಿಡಿದ ಸಾಹಸದ ದೃಶ್ಯದ ವೀಡಿಯೋ ಭಾರೀ ವೈರಲ್ ಆಗಿದೆ.
ಹೆಬ್ಬಾವಿನ ಗಾತ್ರವನ್ನು ಕಂಡು ಅಲ್ಲಿದ್ದ ಗಂಡಸರೇ ಬೆದರುತ್ತಿರುವಾಗ ಗಟ್ಟಿಗಿತ್ತಿ ಮಹಿಳೆ ಶೋಭಾ ಎಂಬವರು ಹೆಬ್ಬಾವನ್ನೇ ಹಿಡಿದು ತಾನು ಯಾವ ಗಂಡಸಿಗೂ ಕಡಿಮೆಯಿಲ್ಲ ಎಂಬುದನ್ನು ತೋರಿಸಿ ಕೊಟ್ಟಿದ್ದಾರೆ.
`ಇಂಡಿಯನ್ ರಾಕ್ ಪೈತಾನ್’ ಎಂದು ಕರೆಯಲಾಗುವ ಹೆಬ್ಬಾವನ್ನು ಶೋಭಾ ಅವರು ಯಾವುದೇ ಭಯವಿಲ್ಲದೆ ನಾಜೂಕಾಗಿ ಹಿಡಿದು ಗೋಣಿ ಚೀಲಕ್ಕೆ ತುಂಬಿಸುವ ಸಾಹಸಿ ವೀಡಿಯೋ ಇದೀಗ ಕರಾವಳಿ ಭಾಗದಲ್ಲಿ ಭಾರೀ ವೈರಲ್ ಆಗುತ್ತಿದೆ. ಬೆಕ್ಕೊಂದರ ಬೇಟೆಯಲ್ಲಿದ್ದ ಹೆಬ್ಬಾವನ್ನು ಅಲ್ಲಿದ್ದ ಯಾರೂ ಹಿಡಿಯಲು ಹೆದರುತ್ತಿದ್ದರೂ, ಶೋಭಾ ಅವರು ಬಹಳ ಚಾಕಚಕ್ಯತೆಯಿಂದ ಹಿಡಿದು ಗೋಣಿಚೀಲದಲ್ಲಿ ತುಂಬಿಸಿ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.