ಮಂಗಳೂರು: ನಗರದ ಪಣಂಬೂರು ಠಾಣಾ ವ್ಯಾಪ್ತಿಯಲ್ಲಿ ವಾಣಿಜ್ಯ ಪ್ರಮಾಣದ ಮಾದಕದ್ರವ್ಯ ಮಾರಾಟ ಮತ್ತು ಸಾಗಾಟ ಮಾಡುತ್ತಿದ್ದ ವಿದೇಶಿ ಪ್ರಜೆ ಸೇರಿದಂತೆ ಆರು ಮಂದಿಯನ್ನು ಪಣಂಬೂರು ಪೊಲೀಸರು ಬಂಧಿಸಿದ್ದಾರೆ. ಪ್ರಕರಣದಲ್ಲಿ ಮಾದಕದ್ರವ್ಯ ಮತ್ತು ಸ್ಕೂಟರನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.
ನೈಜಿರಿಯಾ ದೇಶದ ಪ್ರಜೆ ಮೈಕಲ್ ಬಾಲಾಜಿ ಅಲಿಯಾಸ್ ಅಝಬೈಕ್ ಜಾನಿ, ಮಂಗಳೂರು ನಗರ ವಾಸಿಗಳಾದ ಚಂದನ್, ಶರತ್, ಮಧುಸೂಧನ ಕೊಂಚಾಡಿ, ಧನುಷ್ ಆಕಾಶ್ ಭವನ, ಮುಖೇಶ್ ದೇರೆಬೈಲ್ ಬಂಧಿತ ಆರೋಪಗಳು.
ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಕೆಐಒಸಿಎಲ್ ಹಿಂಭಾಗದ ಸಮುದ್ರ ಕಡೆ ಹೋಗುವ ಮಾರ್ಗದಲ್ಲಿ ಇಬ್ಬರು ಯುವಕರು ಸ್ಕೂಟರ್ ನಿಲ್ಲಿಸಿಕೊಂಡು ಮಾದಕದ್ರವ್ಯ ಮಾರಾಟ ಮಾಡಲು ಯತ್ನಿಸುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಮಂಗಳೂರು ನಗರ ಉತ್ತರ ಉಪ ವಿಭಾಗದ ಎಸಿ ಶ್ರೀಕಾಂತ್ ಕೆ.ಯವರ ನಿರ್ದೆಶನದಂತೆ ಪಣಂಬೂರು ಠಾಣಾ ಪಿಎಸ್ಐ ಶ್ರೀಕಲಾ ಕೆ.ಟಿ. ಸಿಬ್ಬಂದಿಯೊಂದಿಗೆ ಚಂದನ್, ಶರತ್ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ.
ಬಳಿಕ ಮಾದಕದ್ರವ್ಯ ಮಾರಾಟ ಮಾಡಲು ಸಹಕರಿಸಿದ ಇತರ ಆರೋಪಿಗಳಾದ ಮಧುಸೂಧನ ಕೊಂಚಾಡಿ, ಧನುಷ್ ಆಕಾಶ್ ಭವನ, ಮುಖೇಶ್ ದೇರೆಬೈಲ್ ನೈಜಿರಿಯಾ ದೇಶದ ಪ್ರಜೆ ಮೈಕಲ್ ಬಾಲಾಜಿ ಅಲಿಯಾಸ್ ಅಝಬೈಕ್ ಜಾನಿ ಎಂಬವರನ್ನು ದಸ್ತಗಿರಿ ಮಾಡಿದ್ದಾರೆ. ಆರೋಪಿಗಳ ವಶದಲ್ಲಿದ್ದ 11 ಗ್ರಾಂ ಕೋಕೇನ್ ಮತ್ತು ಪ್ಯಾಕೇಟ್ ಸಮೇತ 30 ಗ್ರಾಂ ತೂಕದ ಎಮ್‌ಡಿಎಮ್‌ಎ ಸೇರಿದಂತೆ 91,000 ರೂ.ನಷ್ಟು ಒಟ್ಟು ಮೌಲ್ಯದ ಮಾದಕದ್ರವ್ಯ ಸ್ವಾಧೀನಪಡಿಸಿಕೊಂಡಿದ್ದಾರೆ. ಈ ವೇಳೆ ಮಾದಕದ್ರವ್ಯ ಮಾರಾಟಕ್ಕೆ ಬಳಸಿರುವ ಸ್ಕೂಟರ್ ಮತ್ತು ಒಟ್ಟು 9 ಮೊಬೈಲ್‌ಗಳನ್ನು ಸ್ವಾಧೀನಪಡಿಸಲಾಗಿದೆ.
ಆರೋಪಿತರು ಪೈಕಿ ಐವರು ಮಂಗಳೂರಿನ ನಿವಾಸಿಗಳಾಗಿದ್ದು ಒಬ್ಬ ಆರೋಪಿ ನೈಜೀರಿಯಾ ಪ್ರಜೆಯಾಗಿದ್ದಾನೆ. ಆರೋಪಿಗಳೆಲ್ಲರೂ ಕ್ಯಾಟರಿಂಗ್, ಪೈಂಟಿಂಗ್ ಸೇರಿದಂತೆ ಖಾಸಗಿ ಉದ್ಯೋಗ ಮಾಡುತ್ತಿದ್ದಾರೆ. ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ನ್ಯಾಯಾಲಯವು ಅರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.