ಹೊನ್ನಾವರ: ಸ್ವಿಫ್ಟ್ ಕಾರೊಂದು ಅತೀವೇಗ ಅಜಾಗರೂಕತೆಯಿಂದ ಚಾಲನೆ ಮಾಡಿ ಪಾದಚಾರಿಗೆ ಢಿಕ್ಕಿ ಹೊಡೆದ ಪರಿಣಾಮ ಪಾದಚಾರಿಯೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ, ಹೊನ್ನಾವರದ ಅಗ್ರಹಾರ ಹಳದಿಪುರ ಗ್ರಾಮದ ಮಣ್ಣಗದ್ದೆಯಲ್ಲಿ ಸಂಭವಿಸಿದೆ.
ಫೆ. 23ರ ರಾತ್ರಿ 10:30ರ ಸುಮಾರಿಗೆ ಕುಂಭಮೇಳಕ್ಕೆ ತೆರಳಿದ್ದ, ಕುಂದಾಪುರ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಕಮ್ಮಾರಕೊಡ್ಲು ನಿವಾಸಿ ಸುಕುಮಾರ್ ಸುಬ್ರಾಯ ಆಚಾರ್ಯ (48) ರಾಷ್ಟ್ರೀಯ ಹೆದ್ದಾರಿ 66ರಲ್ಲಿ, ಅತೀವೇಗ ಅಜಾಗರೂಕತೆಯಿಂದ ಚಾಲನೆ ಮಾಡಿಕೊಂಡು ರಸ್ತೆಯ ಪಾದಾಚಾರಿ ಮಾರ್ಗದಲ್ಲಿ ನಡೆದುಕೊಂಡು ಮೊಬೈಲ್ನಲ್ಲಿ ಮಾತನಾಡುತ್ತಾ ತೆರಳುತ್ತಿದ್ದ ಮಹೇಶ್ ಸುಬ್ರಾಯ ಗೌಡ (28) ಎಂಬುವವರಿಗೆ ಢಿಕ್ಕಿ ಹೊಡೆದಿದ್ದಾರೆ. ಢಿಕ್ಕಿಯ ರಭಸಕ್ಕೆ ಮೃತ ಮಹೇಶ್ 10 ಮೀಟರ್ ದೂರಕ್ಕೆ ಎಸೆಯಲ್ಪಟ್ಟಿದ್ದು, ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಮೃತ ಮಹೇಶ್ ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆಗೆ ಆಧಾರವಾಗಿದ್ದ, ಘಟನೆಯ ಸಿಸಿಟಿವಿ ವಿಡಿಯೋ ಕೂಡ ಲಭ್ಯವಾಗಿದ್ದು, ಅಪಘಾತದ ಭೀಕರತೆಯನ್ನು ತೋರಿಸುತ್ತದೆ. ಈ ಕುರಿತು ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.