ಹಂಗಾರಕಟ್ಟೆ: ಸಿಂಹ ಮಾಸದಲ್ಲಿ ಪ್ರತಿ ಬ್ರಾಹ್ಮಣ ಮನೆಗಳಲ್ಲಿ ನಡೆಯುವ ಹೊಸ್ತಿಲು ಪೂಜೆಯನ್ನು ಬಾಳೆಕುದ್ರು ಶ್ರೀ ರಾಮ ಮಂದಿರದಲ್ಲಿ ವಿಪ್ರವೇದಿಕೆ ಐರೋಡಿ ವತಿಯಿಂದ ನೆರವೇರಿತು.


ಐರೋಡಿ, ಪಾಂಡೇಶ್ವರ, ಮಾಬುಕಳ ಮತ್ತು ಬಾಳೆಕುದ್ರು ವ್ಯಾಪ್ತಿಯ ನೂರಾರು ವಿಪ್ರ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮಕ್ಕೂ ಮೊದಲು ವಿಷ್ಣು ಸಹಸ್ರನಾಮ, ಲಲಿತಾ ಸಹಸ್ರನಾಮ ಪಾರಾಯಣ ನಡೆಯಿತು.


ಈ ಸಂದರ್ಭ ಮಾತನಾಡಿದ ಸಂಘಟನೆ ಅಧ್ಯಕ್ಷ ವಿಘ್ನೇಶ್ವರ ಅಡಿಗ, ಸಂಪ್ರದಾಯವನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.






ಕಾರ್ಯಕ್ರಮದ ಆಯೋಜಕ ಸುರೇಶ್ ಅಡಿಗ ಮಾತನಾಡಿ, ಹೊಸ್ತಿಲು ಪೂಜೆ ಎನ್ನುವುದು ಹೊಸ್ತಿಲಜ್ಜಿಯನ್ನು ಆಹ್ವಾನಿಸಿ, 30ಕ್ಕೂ ಬಗೆಯ ಪುಷ್ಪಗಳಿಂದ ಅಲಂಕರಿಸಿ, ಪೂಜೆಯನ್ನು ನಡೆಸುವ ಸಂಪ್ರದಾಯ. ನಾವು ಚಿಕ್ಕವರಿದ್ದಾಗ ನೆಂಟರೊಂದಿಗೆ ಸಂಭ್ರಮಿಸುತ್ತಿದ್ದ ನೆನಪಿನ ಪ್ರೇರಣೆಯಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಹೇಳಿದರು.
ಹೊಸ್ತಿಲು ಪೂಜೆಯನ್ನು ಜಯಲಕ್ಷ್ಮಿ ವಾರಂಬಳ್ಳಿ ಪ್ರಾರಂಬಿಸಿದರು. ನೂರಾರು ಮಹಿಳೆಯರು ಭಕ್ತಿಭಾವದಿಂದ ಪೂಜೆಯನ್ನು ನೆರವೇರಿಸಿದರು.

