ಉಡುಪಿ: ಬಹುನಿರೀಕ್ಷಿತ ಇಂದ್ರಾಳಿ ರೈಲ್ವೇ ಮೇಲ್ಸೇತುವೆ ಕಾಮಗಾರಿ ಪೂರ್ಣಗೊಂಡು ಇದೀಗ ವಾಹನ ಸಂಚಾರಕ್ಕೆ ಮುಕ್ತವಾಗುವ ಮುಹೂರ್ತ ನಿಗದಿಯಾಗಿದೆ ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಇಂದ್ರಾಳಿ ರೈಲ್ವೇ ಮೇಲ್ಸೇತುವೆಯನ್ನು ವೀಕ್ಷಿಸಲು ಬಂದ ಅವರು ಸೇತುವೆಯ ಇಕ್ಕೆಲದಲ್ಲಿ ಹೊಂದಿರುವ ಸ್ಥಳವನ್ನು ಪರಿಶೀಲಿಸಿ, ರಸ್ತೆಯನು ಅಗಲಗೊಳಿಸುವ ಮತ್ತು ಪಕ್ಕದಲ್ಲಿನ ರಿವಿಟ್‌ಮೆಂಟ್ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ ಸನಿಹದಲ್ಲಿರುವ ಖಾಸಗಿ ಶಾಲೆಗೆ ದಾರಿಯನ್ನು ಸುಗಮಗೊಳಿಸುವ ಬಗ್ಗೆ ಸಲಹೆ ನೀಡಿದರು. ಮೇಲ್ಸೇತುವೆಯ ಅಕ್ಕಪಕ್ಕದಲ್ಲಿರುವ ಅಪೂರ್ಣ ಕಾಮಗಾರಿಯನ್ನು ಕೂಡಲೇ ಪೂರ್ಣಗೊಳಿಸಿ ಸಪ್ಟಂಬರ್ ೨೨ ರಂದು ವಾಹನ ಸಂಚಾರಕ್ಕೆ ಮುಕ್ತಗೊಳಿಸುವುದಾಗಿ ತಿಳಿಸಿದರು. ಸಂಪೂರ್ಣಗೊಂಡ ಸೇತುವೆಯ ಕಾಮಗಾರಿ ಉದ್ಘಾಟನೆಯನು ಕೇಂದ್ರ ಹೆದ್ದಾರಿ ಸಚಿವರ ಮೂಲಕ ಲೋಕಾರ್ಪಣೆಗೊಳಿಸಲು ಸಿದ್ಧತೆ ನಡೆಸಲಾಗುವುದೆಂದರು.

ಬಳಿಕ ಕೆಳ ಪರ್ಕಳ ರಾ.ಹೆ. 169ಎ ನಲ್ಲಿ ರಸ್ತೆ ಗುಂಡಿ ಬಿದ್ದು ಸಂಚಾರಕ್ಕೆ ತೊಡಕಾಗಿರುವ ಹಿನ್ನೆಲೆ ಸ್ಥಳಕ್ಕೆ ಭೇಟಿ ನೀಡಿದ ಅವರು, ಗುಂಡಿ ಬಿದ್ದಿರುವ ರಸ್ತೆ ಮತ್ತು ಸಾಕಷ್ಟು ಇಳಿಜಾರಾಗಿರುವ ರಸ್ತೆಯನ್ನು ಪರಿಶೀಲಿಸಿ ಸಮಸ್ಯೆ ಬಗ್ಗೆ ಸ್ಥಳೀಯರೊಂದಿಗೆ ಚರ್ಚಿಸಿದರು. ಬಳಿಕ ರಸ್ತೆ ದುರಸ್ತಿಗೊಳಿಸುವ ಕಾಮಗಾರಿಗೆ ಸೋಮವಾರದಿಂದಲೇ ಚಾಲನೆ ಸಿಗಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮತ್ತು ಎಂಜಿನಿಯರ್‌ಗಳಿಗೆ ಸೂಚಿಸಿದರು. ಇದಕ್ಕೆ ಎಂಜಿನಿಯರ್ ಒಪ್ಪಿಗೆಯನ್ನು ನೀಡಿದ್ದರು. ಏಕಮುಖ ಸಂಚಾರ ವ್ಯವಸ್ಥೆ ಬಗ್ಗೆ ಚರ್ಚಿಸಿದ ಸಂಸದರು, ಪರ್ಕಳದಿಂದ ಉಡುಪಿಗೆ ಈ ರಸ್ತೆಯಲ್ಲಿ ಮತ್ತು ಉಡುಪಿಯಿಂದ ಪರ್ಕಳಕ್ಕೆ ಬದಲಿ ಮಾರ್ಗದ ಬಗ್ಗೆ ಜಿಲ್ಲಾಧಿಕಾರಿಗಳೊಂದಿಗೆ ಚರ್ಚಿಸಿದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸುಧಾಕರ್ ನಾಯ್ಕ್, ಈ ಬಗ್ಗೆ ಮಾಹಿತಿ ನೀಡಿದರು. ರಸ್ತೆ ತುಂಬಾ ಇಳಿಜಾರಾಗಿರುವುದರಿಂದ ದ್ವಿಚಕ್ರ ಮತ್ತು ಬೃಹತ್ ವಾಹನಗಳಿಗೆ ಸಂಚಾರ ಕಷ್ಟವಾಗುತ್ತಿದೆ. ಈ ಹಿನ್ನೆಲೆ ರಸ್ತೆಯ ಎತ್ತರವನ್ನು ತಗ್ಗಿಸುವುದಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಸಂಸದರ ಪ್ರಯತ್ನದಿಂದಾಗಿ ಸದರಿ ಕಾಮಗಾರಿಗೆ ಕೇಂದ್ರ ಸಚಿವಾಲಯದ ಸೂಚನೆ ಮೇರೆಗೆ ಹಣ ಬಿಡುಗಡೆಗೆ ಒಪ್ಪಿರುವುದಾಗಿ ರಾಷ್ಟ್ರೀಯ ಹೆದ್ದಾರಿಯ ಮುಖ್ಯ ಅಧಿಕಾರಿಗಳು ಮಾಹಿತಿ ಒದಗಿಸಿದ್ದಾರೆ ಎಂದು ಸ್ಥಳದಲ್ಲಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾಂi ಪಾಲಕ ಅಭಿಯಂತರರಾದ ಮಂಜುನಾಥ್ ನಾಯಕ್ ತಿಳಿಸಿದರು.

ಈ ಸಂದರ್ಭ ಸಂಸದರೊಂದಿಗೆ ಶಾಸಕರಾದ ಯಶಪಾಲ್ ಸುವರ್ಣ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಪೊಲೀಸ್ ವರಿಷ್ಠಾಧಿಕಾರಿಗಳಾದ ಹರಿರಾಂ ಶಂಕರ್, ಹೆಚ್ಚುವರಿ ಅಧೀಕ್ಷಕರಾದ ಶ್ರೀ ಸುಧಾಕರ ನಾಯ್ಕ್, ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಶ್ರೀ ಮಂಜುನಾಥ ನಾಯಕ್, ನಗರಸಭಾ ಸದಸ್ಯರಾದ ಶ್ರೀಮತಿ ಸುಮಿತ್ರಾ ನಾಯಕ್, ಶ್ರೀ ಗಿರೀಶ್ ಅಂಚನ್, ಶ್ರೀ ಅಶೋಕ್ ನಾಯ್ಕ್ ಮೊದಲಾದವರು ಇದ್ದರು.

