ಸಾಸ್ತಾನ: ಬಾಳೆಕುದ್ರು ಶ್ರೀ ನೃಸಿಂಹಾಶ್ರಮ ಸ್ವಾಮೀಜಿ (55) ಶುಕ್ರವಾರ ಬ್ರಹ್ಮೈಕ್ಯರಾಗಿದ್ದಾರೆ
ಶುಕ್ರವಾರ ಬೆಳಗ್ಗೆ ಡಯಾಲಿಸಿಸ್ಗೆಂದು ಕರೆದುಕೊಂಡು ಹೋಗುವಾಗ ಬ್ರಹ್ಮಾವರ ಸಮೀಪ ಆರೋಗ್ಯದಲ್ಲಿ ಏರುಪೇರಾಗಿದ್ದು, ಅವರನ್ಬು ತಕ್ಷಣ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಮಾರ್ಗಮಧ್ಯದಲ್ಲೇ ಮೃತಪಟ್ಟಿದ್ದರು.

ಇದೀಗ ಶ್ರೀಗಳನ್ನು ಬಾಳೆಕುದ್ರು ಮಠಕ್ಕೆ ತರಲಾಗಿದ್ದು, ಭಕ್ತರ ಅಂತಿಮ ದರ್ಶನಕ್ಕೆ ಇಡಲಾಗಿದೆ. ಸಂಜೆ ನಾಲ್ಕು ಗಂಟೆ ಬಳಿಕ ಕಿರಿಯ ಶ್ರೀಗಳಾದ ಶ್ರೀ ವಾಸುದೇವ ಸದಾಶಿವಾಶ್ರಮ ಸ್ವಾಮೀಜಿಗಳ ಮೂಲಕ ವಿಧಿವಿಧಾನಗಳು ನೆರವೇರಲಿದೆ ಎಂದು ಮಠದ ಮೂಲಗಳು ತಿಳಿಸಿದೆ.
ಶ್ರೀಮಠದ ಪೂರ್ವ ಸ್ವಾಮೀಜಿಗಳಾದ ಶಂಕರಾಶ್ರಮ ಸ್ವಾಮಿಜಿಗಳು ಬ್ರಹ್ಮೈಕ್ಯರಾದ ನಂತರ ಶ್ರೀ ನೃಸಿಂಹಾಶ್ರಮ ಶ್ರೀಗಳು,2006ರಲ್ಲಿ ಬಾಳೆಕುದ್ರು ಮಠದ ಪೀಠಾಧಿಪತಿಗಳಾದರು. ಶೃಂಗೇರಿ ಹಿರಿಯ ಶ್ರೀಗಳ ನೇತೃತ್ವದಲ್ಲಿ ಹೆಬ್ಬೂರು ಮಠದ ನಾರಾಯಣಾಶ್ರಮ ಸ್ವಾಮಿಗಳಿಂದ ಸನ್ಯಾಸ ದೀಕ್ಷೆ ಪಡೆದರು. ಹಲವು ವರ್ಷಗಳಿಂದ ವಿವಿಧ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಶ್ರೀಗಳಿಗೆ ವಾರಕ್ಕೆರಡು ಬಾರಿ ಡಯಾಲಿಸಿಸ್, ನಡೆಯುತ್ತಿತ್ತು.